ಗಾಂಜಾ ಸಿಕ್ಕಿಲ್ಲವೆಂದು 20 ಸೆಂ.ಮೀ ಉದ್ದದ ಚಾಕುವನ್ನೇ ನುಂಗಿದ 28ರ ಯುವಕ!

– ಹೊಟ್ಟೆನೋವು ಎಂದು ಬಂದಾಗ ವೈದ್ಯರೇ ದಂಗಾದ್ರು

ನವದೆಹಲಿ: ಅನೇಕ ಸವಾಲುಗಳನ್ನು ಎದುರಿಸಿರುವ ದೆಹಲಿಯ ಏಮ್ಸ್ ವೈದ್ಯರಿಗೆ ವಿಚಿತ್ರ ಸವಾಲೊಂದು ಎದುರಾಗಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ.

ಹೌದು. 28 ವರ್ಷದ ಯುವಕನೊಬ್ಬನ ಲಿವರ್ ನಿಂದ 20 ಸೆಂ.ಮೀ ಉದ್ದದ ಚಾಕುವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಯುವಕನ ಸ್ಥಿತಿ ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಯುವಕ ಒಂದೂವರೆ ತಿಂಗಳ ಹಿಂದೆ ಚಾಕುವನ್ನು ನುಂಗಿದ್ದು, ಆರಾಮಾಗಿಯೇ ಇದ್ದನಂತೆ. ಆದರೆ ಇತ್ತೀಚೆಗೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ಆತನನ್ನು ಪರೀಕ್ಷೆ ಮಾಡಿದ ವೈದ್ಯರು, ಎಕ್ಸ್ ರೇ ತೆಗೆಯಬೇಕು ಎಂದು ಹೇಳಿದ್ದಾರೆ. ಅಂತೆಯೇ ಎಕ್ಸ್ ರೇ ತೆಗೆದು ನೋಡಿದಾಗ ಆತನ ಲಿವರ್ ನಲ್ಲಿ ಚಾಕು ಕಂಡು ವೈದ್ಯರಿಗೇ ಶಾಕ್ ಆಗಿದೆ.

ಯುವಕನಿಗೆ ಆದಷ್ಟು ಬೇಗ ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಆತನ ಪೋಷಕರಿಗೆ ವೈದ್ಯರು ತಿಳಿಸಿದ್ದಾರೆ. ಅಂತೆಯೇ 3-4 ಗಂಟೆಗಳ ಕಾಲ ಸರ್ಜರಿ ನಡೆಸಿದ ಬಳಿಕ ವೈದ್ಯರ ತಂಡ ಚಾಕು ಹೊರತೆಗೆಯುವಲ್ಲಿ ಯಶಸ್ಸು ಕಂಡಿದೆ.

ಚಾಕು ಲಿವರ್‍ನ ಪ್ರಮುಖ ರಕ್ತನಾಳದ ಬಳಿ ಸಿಲುಕಿಕೊಂಡಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಯ ವೇಳೆ ಸ್ವಲ್ಪ ಎಡವಟ್ಟಾಗುತ್ತಿದ್ದರೂ ಯುವಕನ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆದಷ್ಟು ಜಾಗರೂಕತೆ ವಹಿಸಿ ನಮ್ಮ ತಂಡ ಸರ್ಜರಿ ಮಾಡಿತು ಎಂದು ವೈದ್ಯ ಡಾ. ಎನ್.ಆರ್ ದಾಸ್ ತಿಳಿಸಿದರು.

ಒಬ್ಬ ವ್ಯಕ್ತಿ ಇಡೀ ಚಾಕುವನ್ನು ನುಂಗಿ ಬದುಕುಳಿದಿದ್ದು ಇದೇ ಮೊದಲು. ಇದೂವರೆಗೂ ಸೂಜಿ, ಪಿನ್ ಹಾಗೂ ಮೀನಿನ ಕೊಕ್ಕೆಯಂತಹ ಅತೀ ಸೂಕ್ಷ್ಮವಾದ ವಸ್ತುಗಳನ್ನು ನುಂಗಿದ 2 ಅಥವಾ 3 ಪ್ರಕರಣಗಳನ್ನು ನೋಡಿರುವುದಾಗಿ ಏಮ್ಸ್ ವೈದ್ಯರು ತಿಳಿಸಿದ್ದಾರೆ.

ಈ ರೋಗಿ ಮೂಲತಃ ಹರಿಯಾಣದವನಾಗಿದ್ದು, ಮಾದಕ ವ್ಯಸನಿಯಾಗಿದ್ದಾನೆ. ಈತನಿಗೆ ಒಂದು ದಿನ ಗಾಂಜಾ ಸಿಕ್ಕಿಲ್ಲ ಎಂದು ಬೇಸರದಿಂದ ಚಾಕುವನ್ನೇ ನುಂಗಿದ್ದಾನೆ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *