ಗಾಂಜಾ ಪೆಡ್ಲರ್ಸ್ ಅರೆಸ್ಟ್ – 10 ಲಕ್ಷ ಮೌಲ್ಯದ 32 ಕೆಜಿ ಗಾಂಜಾ ವಶ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಗಾಂಜಾ ಸಾಗಾಟ ಮಾಡುತ್ತಿದ್ದ ಗಾಂಜಾ ಪೆಡ್ಲರ್‌ಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಟೆ ಬಳಿ ದಾಳಿ ನಡೆಸಿದ ಪೊಲೀಸರು ಇಂಡಿಕಾ ಕಾರನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿದ್ದ ಬರೋಬ್ಬರಿ 10 ಲಕ್ಷ ಮೌಲ್ಯದ 32 ಕೆಜಿ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಆಂಧ್ರಪ್ರದೇಶದ ಚಿತ್ತೂರು ಮೂಲದ ಶಂಕರ್ ಹಾಗೂ ಶಿಡ್ಲಘಟ್ಟ ಮೂಲದ ಶಭಾಜ್‍ನನ್ನ ಬಂಧಿಸಲಾಗಿದೆ.

ಈ ಕೃತ್ಯಕ್ಕೆ ಬಳಸಿದ ಇಂಡಿಕಾ ಕಾರನ್ನ ಸಹ ವಶಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರದ ಗಡಿಗೆ ಹೊಂದಿಕೊಂಡಿರೋದರಿಂದ ಜಿಲ್ಲೆಯ ಪೊಲೀಸರು ಗಡಿಭಾಗದಲ್ಲಿ ಶ್ವಾನದಳದೊಂದಿಗೆ ತಪಾಸಣೆ ನಡೆಸುತ್ತಿದ್ದು, ಗಾಂಜಾ ಸಾಗಾಟಗಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಬಂಧಿತ ಆರೋಪಿಗಳು ನೆರೆಯ ರಾಜ್ಯದ ವಿಶಾಖಪಟ್ಟಣಂ, ರಾಜಮಂಡ್ರಿ, ಅನಂತಪುರ ಸೇರಿದಂತೆ ಮತ್ತಿತರ ಭಾಗಗಳಿಂದ ಈ ಗಾಂಜಾವನ್ನ ತರುತ್ತಿದ್ದೀವಿ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಕಳೆದ ಒಂದು ವಾರದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು, ಅಕ್ರಮ ಗಾಂಜಾಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಆಂಧ್ರ ಪ್ರದೇಶದ ಗಡಿಯಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ, ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾವಹಿಸಿ ತಪಾಸಣೆ ಕಾರ್ಯ ನಡೆಸುತ್ತಿದ್ದೇವೆ. ಅಲ್ಲದೇ ನೆರೆಯ ಆಂಧ್ರ ಪ್ರದೇಶದ ಅನಂತಪುರ, ಚಿತ್ತೂರು ಪೊಲೀಸರ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಗಾಂಜಾ ಸಾಗಾಟಕ್ಕೆ ಬ್ರೇಕ್ ಹಾಕುತ್ತಿದ್ದೇವೆ ಎಂದು ಚಿಕ್ಕಬಳ್ಳಾಪುರ ಎಸ್‍ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *