ಗಾಂಜಾ ದಂಧೆಕೋರರಿಂದ ಪಿಎಸ್‍ಐ ಮೇಲೆ ಹಲ್ಲೆ

ಶಿವಮೊಗ್ಗ: ಗಾಂಜಾ ಮಾರಾಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲು ತೆರಳಿದ್ದ ಪಿಎಸ್‍ಐ ಹಾಗೂ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಮಂಡಘಟ್ಟ ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಗಾಂಜಾ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಆದರೂ ಪೊಲೀಸರು ಗಾಂಜಾ ದಂಧೆಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದಿದ್ದರು.

ಈ ನಂತರ ಎಚ್ಚೆತ್ತ ಇಲಾಖೆ ಜಿಲ್ಲೆಯ ಎಲ್ಲೆಡೆ ದಾಳಿ ನಡೆಸಿ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಅದರಂತೆ ಕುಂಸಿ ಠಾಣೆ ಪಿಎಸ್‍ಐ ನವೀನ್ ಮಠಪತಿ ಹಾಗೂ ಸಿಬ್ಬಂದಿ ಮಂಡಘಟ್ಟ ಗ್ರಾಮಕ್ಕೆ ತೆರಳಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಸಹೋದರರಾದ ಮಧು ಹಾಗೂ ಮನುನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳು ಪಿಎಸ್‍ಐ ನವೀನ್ ಮಠಪತಿ ಹಾಗೂ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿದ್ದ ಪಿಎಸ್‍ಐ ನವೀನ್ ಮಠಪತಿ ಅವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‍ಪಿ ಶಾಂತರಾಜ್ ಅವರು ಪಿಎಸ್‍ಐ ಅವರಿಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೇ ಈಗಾಗಲೇ ಆರೋಪಿಗಳ ಪತ್ತೆಗೆ ಶಿವಮೊಗ್ಗ ಗ್ರಾಮಾಂತರ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧಿಸುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *