ಗಲ್ವಾನ್‌ ಘರ್ಷಣೆ – ಚೀನಿ ಯೋಧರ ಸಾವಿಗೆ ಸಿಕ್ಕಿತು ಮೊದಲ ಸಾಕ್ಷ್ಯ

ಬೀಜಿಂಗ್‌: ಗಲ್ವಾನ್‌ನಲ್ಲಿ ನಡೆದ ಘರ್ಷಣೆಯಲ್ಲಿ ಪಿಎಲ್‌ಎ ಸೈನಿಕರು ಮೃತಪಟ್ಟಿದ್ದಾರೆ ಎಂದು ಭಾರತದ ಸೇನೆ ಹೇಳಿದ್ದರೂ ಚೀನಾ ಮಾತ್ರ ಇಲ್ಲಿಯವರೆಗೆ ಮೃತಪಟ್ಟಿರುವುದನ್ನು ಖಚಿತಪಡಿಸಿಲ್ಲ. ಆದರೆ ಈಗ ಚೀನಾ ಸೈನಿಕರು ಮೃತಪಟ್ಟಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ.

ಚೀನಾದ ಸಾಮಾಜಿಕ ಜಾಲತಾಣವಾದ ವಿಬೋದದಲ್ಲಿ ಹುತಾತ್ಮ ಯೋಧನ ಸಮಾಧಿಯ ಫೋಟೋ ವೈರಲ್‌ ಆಗಿದೆ.

ದಕ್ಷಿಣದ ಕ್ಸಿನ್‌ಜಿಯಾಂಗ್‌ ಸೇನಾವಲಯದಲ್ಲಿ ಮೃತ ಯೋಧನ ಸಮಾಧಿಯನ್ನು ಸ್ಥಾಪನೆ ಮಾಡಲಾಗಿದೆ. ಈ ಸಮಾಧಿಯ ಮೇಲೆ ಚೆನ್‌ ಕ್ಸಿಯಾಂಗ್‌ರಾಂಗ್‌, 19316 ಪಡೆಯ ಯೋಧ. 2020ರ ಜೂನ್‌ನಲ್ಲಿ ಭಾರತದ ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮನಾದ ಸೈನಿಕ ಎಂದು ಬರೆಯಲಾಗಿದೆ.

ಫೋಟೋ ವೈರಲ್‌ ಆದ ಕೂಡಲೇ ಇದು ಚೀನಾ ಸೈನಿಕರು ಈ ಘರ್ಷಣೆಯಲ್ಲಿ ಮೃತಪಟ್ಟಿದ್ದಾರೆ ಎಂಬುದಕ್ಕೆ ಸಿಕ್ಕಿದ ಮೊದಲ ಸಾಕ್ಷ್ಯ ಎಂದು ವಿಶ್ಲೇಷಿಸಲಾಗುತ್ತಿದೆ.

ತಂಟೆಕೋರ ಚೀನಾ ಇಲ್ಲಿಯವರೆಗೆ ಸಾವು ನೋವಿನ ಬಗ್ಗೆ ಅಧಿಕೃತವಾಗಿ ಸುದ್ದಿ ಪ್ರಕಟಿಸದೇ ಇದ್ದರೂ ಚೀನಾದ ಸರ್ಕಾರದ ಮುಖವಾಣಿ ಇಂಗ್ಲಿಷ್ ಗ್ಲೋಬಲ್‌ ಟೈಮ್ಸ್‌ ‌ ಸಂಪಾದಕ ಈ ಹಿಂದೆ ಸಾವು ಸಂಭವಿಸಿದೆ ಎಂಬುದನ್ನು ಒಪ್ಪಿಕೊಂಡಿದ್ದರು.

ಗ್ಲೋಬಲ್‌ ಟೈಮ್ಸ್‌ ಸಂಪಾದಕ ಹು ಕ್ಸಿಜಿನ್‌ ಟ್ವೀಟ್‌ ಮಾಡಿ,”ನನಗೆ ತಿಳಿದ ಮಾಹಿತಿ ಪ್ರಕಾರ ಗಲ್ವಾನ್‌ ಕಣಿವೆಯಲ್ಲಿ ಘರ್ಷಣೆಯಲ್ಲಿ ಚೀನಾದ ಸೈನಿಕರು ಮೃತಪಟ್ಟಿದ್ದಾರೆ. ಹೀಗಾಗಿ ನಾನು ಭಾರತಕ್ಕೆ ಒಂದು ವಿಚಾರ ಹೇಳಲು ಇಚ್ಛಿಸುತ್ತೇನೆ. ಚೀನಾದ ಸಹನೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ. ಭಾರತದ ಜೊತೆ ಘರ್ಷಣೆ ನಡೆಸಲು ಚೀನಾ ಬಯಸುತ್ತಿಲ್ಲ. ಆದರೆ ನಾವು ಯಾರಿಗೂ ಭಯ ಪಡುವುದಿಲ್ಲ” ಎಂದು ಟ್ವೀಟ್‌ ಮಾಡಿದ್ದರು. ಇದನ್ನೂ ಓದಿ: ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ

ಲಡಾಖ್‌ ಗಡಿಯಲ್ಲಿ ಜೂನ್‌ 15 ರಂದು ನಡೆದ ಗರ್ಷಣೆಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಭಾರತ ಹೇಳಿತ್ತು. ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು. ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

Comments

Leave a Reply

Your email address will not be published. Required fields are marked *