ಗಡಿಯೊಳಗೆ ನುಸುಳಲು 6 ಮಂದಿ ಪಾಕಿಸ್ತಾನಿಗಳು ಯತ್ನ

– ಬಿಎಸ್‍ಎಫ್ ಫೈರಿಂಗ್‍ಗೆ ಪತರುಗುಟ್ಟಿದ ಪಾಕ್

ಚಂಡೀಗಢ: ಪಂಜಾಬ್ ರಾಜ್ಯದ ಗುರುದಾಸಪುರ ಜಿಲ್ಲೆಯ ಗಡಿಯಲ್ಲಿ ಪಾಕಿಸ್ತಾನದ ಆರು ಜನರು ಭಾರತದೊಳಗೆ ನುಸುಳಲು ಪ್ರಯತ್ನಿಸಿದ್ದಾರೆ. ಈ ವೇಳೆ ಗಸ್ತಿನಲ್ಲಿದ್ದ ಬಿಎಸ್‍ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ಬಿಎಸ್‍ಎಫ್ ಫೈರಿಂಗ್‍ಗೆ ಪತರುಗುಟ್ಟಿದ ಪಾಕಿಗಳು ಕಾಲ್ಕಿತ್ತಿದ್ದಾರೆ. ಶನಿವಾರ ರಾತ್ರಿ ಚಕರಿ ಪೋಸ್ಟ್ ಬಳಿ ಫೈರಿಂಗ್ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಚಕರಿ ಪೋಸ್ಟ್ ವ್ಯಾಪ್ತಿಯಲ್ಲಿ ಸೇನೆ ಸರ್ಚ್ ಆಪರೇಷನ್ ನಡೆಸುತ್ತಿದೆ.

ಶನಿವಾರ ರಾತ್ರಿ ಪಾಕಿಸ್ತಾನದ ಮಾರ್ಗದಿಂದ ಬಂದ ಆರು ಜನರು ಚಕರಿ ಪೋಸ್ಟ್ ಬಳಿ ದೇಶದೊಳಗೆ ನುಸಳಲು ಪ್ರಯತ್ನಿಸುತ್ತಿದ್ದರು. ಕೂಡಲೇ ಬಿಎಸ್‍ಎಫ್ ಯೋಧರು ಫೈರಿಂಗ್ ಮಾಡಿದ್ದಾರೆ. ಘಟನೆ ಸಂಬಂಧ ಪಂಜಾಬ್ ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ. ಸದ್ಯ ಬಿಎಸ್‍ಎಫ್ ಮತ್ತು ಪಂಜಾಬ್ ಪೊಲೀಸರು ಜೊತೆಯಾಗಿ ಸರ್ಚ್ ಆಪರೇಷನ್ ನಡೆಸುತ್ತಿದ್ದಾರೆ ಎಂದು ಬಿಎಸ್‍ಎಫ್ ನ ಡಿಐಜಿ ರಾಜೇಶ್ ಶರ್ಮಾ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಎಲ್‍ಓಸಿ ಬಳಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಗುಂಡಿನ ದಾಳಿ ನಡೆಸಿತ್ತು. ದಾಳಿಯಲ್ಲಿ ಬಿಎಸ್‍ಎಫ್ ಮತ್ತು ಸೇನೆಯ ಐವರು ಯೋಧರು ಹುತಾತ್ಮರಾಗಿದ್ದರು. ಇದೇ ದಾಳಿಯಲ್ಲಿ ಐವರು ನಾಗರಿಕರು ಸಹ ಸಾವನ್ನಪ್ಪಿದ್ದರು.

ಪಾಕ್ ದಾಳಿಗೆ ಪ್ರತ್ಯತ್ತುರ ನೀಡಿದ ಇಂಡಿಯನ್ ಆರ್ಮಿ, ಪಾಕಿಸ್ತಾನ ಸೇನಾ ಬಂಕರ್, ಉಗ್ರರ ಅಡಗುತಾಣಗಳನ್ನು ಉಡೀಸ್ ಮಾಡಿತ್ತು. ಈ ದಾಳಿಯಲ್ಲಿ ಪಾಕಿಸ್ತಾನದ ಮೂರು ಕಮಾಂಡೋಗಳು ಸೇರಿದಂತೆ 11 ಸೈನಿಕರು ಸಾವನ್ನಪ್ಪಿದ್ದರು. ಪಾಕಿಸ್ತಾನದ ಬಂಕರ್ ಗಳನ್ನು ಸ್ಫೋಟಗೊಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *