ಗಂಡು ಮಗುವಿಗಾಗಿ 4 ಹೆಣ್ಣು ಮಕ್ಕಳನ್ನು ಮಾರಾಟಕ್ಕಿಟ್ಟ ಅಪ್ಪ

ಚಿಕ್ಕಬಳ್ಳಾಪುರ: ಗಂಡು ಮಗು ಬೇಕೇ ಬೇಕೆಂದು ವ್ಯಕ್ತಿ ತನ್ನ 4 ಹೆಣ್ಣು ಮಕ್ಕಳನ್ನು ಮಾರಾಟಕ್ಕಿಟ್ಟಿದ್ದಾನೆ. ಮಕ್ಕಳನ್ನು ಮಾರುವುದು ಬೇಡ ಎಂದಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರದಬ್ಬಿದ್ದಾನೆ.

ನಗರದ ಅಂಬೇಡ್ಕರ್ ಕಾಲೋನಿಯ ಪಾಪಿ ತಂದೆಯ ಹೆಸರು ಮುನಿಯಪ್ಪ, ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಈತ, 8 ವರ್ಷಗಳ ಹಿಂದೆ ಸಂಜು ಅವರನ್ನು ಮದುವೆಯಾಗಿದ್ದ. ಬಳಿಕ 4 ಹೆಣ್ಣು ಮಕ್ಕಳ ತಂದೆಯಾಗಿದ್ದಾನೆ. ಆದರೆ ಗಂಡು ಮಗು ಬೇಕೇ ಬೇಕೆಂದು ಪತ್ನಿಗೆ ಅಪರೇಷನ್ ಮಾಡಿಸಿಲ್ಲ. ಮಾತ್ರವಲ್ಲದೆ ಈಗಿರುವ 4 ಹೆಣ್ಣು ಮಕ್ಕಳು ನಮಗ್ಯಾಕೆ, ಗಂಡು ಮಗು ಮಾಡಿಕೊಳ್ಳೋಣ ಎಂದು ಹೆಣ್ಣು ಮಕ್ಕಳನ್ನು ಕದ್ದು ಮುಚ್ಚಿ ಮಾರಾಟ ಮಾಡೋಕೆ ಮುಂದಾಗಿದ್ದಾನೆ.

ಇದನ್ನು ಪತ್ನಿ ವಿರೋಧಿಸಿದ್ದಕ್ಕೆ ಪ್ರತಿ ದಿನ ಹಿಂಸೆ ನೀಡಿ, ಹಲ್ಲೆ ಮಾಡಿ, ಮನೆಯಿಂದಲೇ ಹೊರಹಾಕಿದ್ದಾನೆ. ಹಲ್ಲೆ ತಾಳಲಾಗದ ಪತ್ನಿ, ಇಬ್ಬರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಉಳಿದಿಬ್ಬರು ಮಕ್ಕಳ ಜೊತೆ ಮನೆ ಬಿಟ್ಟು ಹೊರ ಬಂದಿದ್ದಾರೆ. ಏನು ಮಾಡಬೇಕೆಂದು ಗೊತ್ತಾಗದೆ ಬೀದಿ ಅಲೆದು ಕೊನೆಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ವಾಂತನ ಕೇಂದ್ರದ ಅಧಿಕಾರಿಗಳ ಬಳಿ ತನ್ನ ಅಳಲು ತೋಡಿಕೊಂಡಿದ್ದಾರೆ.

ಮಹಿಳೆಯ ಕಷ್ಟ ಆಲಿಸಿದ ಸಾಂತ್ವನ ಕೇಂದ್ರದ ಅಧಿಕಾರಿಗಳು, ಮಹಿಳೆಯನ್ನು ಮನೆಗೆ ಕರೆದುಕೊಂಡು ಹೋಗಿ ಪತಿಗೆ ಬುದ್ಧಿವಾದ ಹೇಳಿದ್ದಾರೆ. 4 ಮಕ್ಕಳನ್ನು ಸದ್ಯ ಬಾಲಮಂದಿರಕ್ಕೆ ಸೇರಿಸಿಕೊಂಡು ಉಚಿತ ವಿದ್ಯಾಭ್ಯಾಸ ಕೊಡಿಸುವ ಭರವಸೆ ನೀಡಿ ಕ್ರಮ ಕೈಗೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *