ಖೋಡೆಸ್ ರಮ್ ಕುಡಿದ್ರೆ ಕೊರೊನಾ ಓಡುತ್ತೆ- ಉಳ್ಳಾಲ ‘ಕೈ’ ಕೌನ್ಸಿಲರ್ ಬಿಟ್ಟಿ ಸಲಹೆ

ಮಂಗಳೂರು: ಖೋಡೆಸ್ ರಮ್ ಕುಡಿದ್ರೆ ಕೊರೊನಾ ವೈರಸ್ ಹತ್ತಿರನೇ ಸುಳಿಯೋದಿಲ್ಲ ಎಂದು ಉಳ್ಳಾಲನಗರ ಸಭೆಯಲ್ಲಿ ಕಾಂಗ್ರೆಸ್ ಕೌನ್ಸಿಲರ್ ಹೇಳಿದ ಬಿಟ್ಟಿ ಉಪದೇಶ ಇದೀಗ ಎಲ್ಲರ ಟೀಕೆಗೆ ಗುರಿಯಾಗಿದೆ.

ಉಳ್ಳಾಲ ನಗರ ಸಭೆಯ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ, ಮದ್ಯದ ಬಾಟಲಿ ಹಿಡಿದುಕೊಂಡು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ತಾನು ಕುಡಿಯುವುದಿಲ್ಲ ಎಂದು ಹೇಳಿಕೊಂಡು ಮದ್ಯ ತುಂಬಿದ ಬಾಟಲಿ ಹಿಡಿದು ಜನಸಾಮಾನ್ಯರಿಗೆ ಖೋಡೆಸ್ ರಮ್ ಕುಡಿಯಲು ಸಲಹೆ ನೀಡುತ್ತಿರುವ ವೀಡಿಯೋ ವೈರಲ್ ಆಗಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಜನಪ್ರತಿನಿಧಿಯಾಗಿರುವ ರವಿ ಅವರು ಮದ್ಯದ ಬಾಟಲಿ ಹಿಡಿದು ಕೊರೊನಾ ವಾಸಿಯಾಗಲು ಮದ್ಯಪಾನ ಮಾಡಿ ಎಂದು ಪ್ರೇರೇಪಿಸುವುದು ತಪ್ಪು ಸಂದೇಶ ರವಾನಿಸುವುದಲ್ಲದೆ, ಅಬಕಾರಿ ಕಾಯ್ದೆ ಪ್ರಕಾರ ಅಪರಾಧ. ಮಕ್ಕಳು ಈ ವೀಡಿಯೋ ನೋಡಿ ಕೊರೊನಾಕ್ಕೆ ಔಷಧವೆಂದು ಕುಡಿದರೆ ಗತಿ ಏನು ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಖೋಡೆಸ್ ರಮ್ ಗೆ ಕರಿಮೆಣಸು ಪೌಡರ್ ಸೇರಿಸಿ ಕುಡಿಯುವ ಜೊತೆಗೆ ಎರಡು ಮೊಟ್ಟೆಗೆ ಕರಿಮೆಣಸು ಪುಡಿ ಸೇರಿಸಿ ಹಾಫ್ ಬಾಯ್ಲ್ಡ್ ಮಾಡಿ ರಮ್ ಜೊತೆ ಸೇವಿಸಿದರೆ ಕೊರೊನಾ ಹತ್ತಿರ ಸುಳಿಯಲ್ಲ. ನಾನು ಕುಡಿಯೋದಿಲ್ಲ, ಮೀನು ತಿನ್ನೋದಿಲ್ಲ. ಆದ್ರೆ ನಾನು ಹೇಳುವ ಮಾತು ಅನುಭವದ ಮಾತು. ಹೀಗಾಗಿ ಯಾರೂ ಕೊರೊನಾಗೇ ಹೆದರಬೇಡಿ ಖೋಡೆಸ್ ರಮ್ ಕುಡಿಯಿರಿ ಎಂದಿದ್ದಾರೆ.

ಈ ಹಿಂದೆ ಇದೇ ಪಾನಕ ರವಿ, ತನ್ನದೇ ಪಕ್ಷದ ಶಾಸಕ ಯು.ಟಿ ಖಾದರ್ ವಿರುದ್ಧ ಮಾತನಾಡಿದ ವೀಡಿಯೋ ವೈರಲ್ ಆಗಿತ್ತು. ರವಿಚಂದ್ರ ಗಟ್ಟಿ ಅವರು ಹಾಸ್ಯ ಪ್ರಜ್ಞೆಯುಳ್ಳವರಾಗಿದ್ದು ತೊಕ್ಕೊಟ್ಟಿನಲ್ಲಿ ಪಾನಕ ರವಿ ಎಂದೇ ಹೆಸರಾದವರು. ಕಳೆದ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಿ ರವಿ ಜಯ ಗಳಿಸಿದ್ದರು.

ಜಾಗತಿಕ ಮಹಾಮಾರಿ ಕೊರೊನಾವನ್ನು ತಮಾಷೆಗಾಗಿ ಉಪಯೋಗಿಸಿ ಜನರಿಗೆ ಮದ್ಯಪಾನ ಮಾಡಲು ಜನಪ್ರತಿನಿಧಿಗಳೇ ಪ್ರೇರೇಪಿಸುವುದು ಸರಿಯಲ್ಲ ಎಂದು ಕೆಲವರು ರವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *