ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಳ್ಳೋ ಪ್ರಶ್ನೆಯೇ ಇಲ್ಲ: ಕೋಟಾ

ಬೆಂಗಳೂರು: ಖಾಸಗಿ ದೇವಸ್ಥಾನಗಳನ್ನು ಸ್ವಾಧೀನ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ವಿಧಾನಸಭಾ ಕಲಾಪದ ವೇಳೆ ಸಚಿವರು, ಮಾಧ್ಯಮಗಳಲ್ಲಿ ಬಂದ ಸುದ್ದಿ ನೋಡಿದ್ದೇನೆ. ಧಾರ್ಮಿಕ ದತ್ತಿ ಇಲಾಖೆಯಿಂದ ಹೊರಗಿರುವ ಖಾಸಗಿ ಸುತ್ತೋಲೆಯಿಂದ ಖಾಸಗಿ ದೇವಸ್ಥಾನದವರು ಆತಂಕ ಪಡುವ ಅಗತ್ಯ ಇಲ್ಲ. ಇದು ನಿರಂತರ ಪ್ರಕ್ರಿಯೆಯಾಗಿದೆ ಎಂದರು.

ದೇವಸ್ಥಾನಗಳನ್ನ ನೋಂದಣಿ ಮಾಡಿಕೊಳ್ಳಬೇಕು ಅಂತ 2015ರಲ್ಲಿ ಧಾರ್ಮಿಕ ದತ್ತಿ ಕಾಯಿದೆ ತಿದ್ದುಪಡಿ ತರಲಾಗಿದೆ. ಇದರ ಅರ್ಥ ಸರ್ಕಾರ ಖಾಸಗಿ ದೇವಸ್ಥಾನಗಳ ಮೇಲೆ ಹಕ್ಕು ಚಲಾಯಿಸುವುದು, ನಿಗಾ ಇಡೋದು, ಸ್ವಾಯತ್ತ ತೆಗೆದುಕೊಳ್ಳುವುದಲ್ಲ ಎಂದು ಸ್ಪಷ್ಟಪಡಿಸಿದರು.

ನೋಂದಣಿ ಪ್ರಕ್ರಿಯೆಯ ನೆನಪಿನ ಸುತ್ತೋಲೆ ಕೊಟ್ಟಿದ್ದೇವೆ. ಖಾಸಗಿ ದೇವಸ್ಥಾನ ಸ್ವಾಯತ್ತ ಪಡೆಯುವ ಯಾವುದೇ ಪ್ರಸಂಗ ಇಲ್ಲ. ಖಾಸಗಿ ದೇವಸ್ಥಾನ ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಆತಂಕ ಬೇಡ. 2011ರಲ್ಲಿ ಕಾಯಿದೆ ತಂದಿರುವುದು 2015 ರಲ್ಲಿ ಜಾರಿ ಮಾಡಿದ್ದಾರೆ. 2016, 17, 18, 19, 20ರಲ್ಲಿ ನೆನಪಿನ ಸುತ್ತೋಲೆ ಕೊಡುತ್ತಾ ಬಂದಿದ್ದೇವೆ. ಮೊನ್ನೆ ಸಹ ಅಂತಹದೇ ಸುತ್ತೋಲೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ನನ್ನ ಗಮನಕ್ಕೆ ಬಾರದೇ ಇದು ರೆಗ್ಯುಲರ್ ಪ್ರೋಸಸ್ ರೀತಿ ಸುತ್ತೋಲೆ ಹೋಗಿರುತ್ತೆ. ಆದರೆ ಖಾಸಗಿ ದೇವಸ್ಥಾನಗಳ ಸ್ವಾಧೀನ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ವಾಪಸ್ ತೆಗೆದುಕೊಳ್ಳಬೇಕು ಅಂತ ಯಾರಾದರೂ ಹೇಳಿದ್ರೆ ಪರಿಶೀಲನೆ ಮಾಡ್ತೀವಿ. ಖಾಸಗಿ ದೇವಸ್ಥಾನಗಳು ಖಾಸಗಿಯಾಗಿಯೇ ಮುಂದುವರಿಯುತ್ತೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *