ಖಾರದ ಪುಡಿ ಎರಚಿ 1.28 ಲಕ್ಷ ದೋಚಿದವರ ಹೆಡೆಮುರಿ ಕಟ್ಟಿದ ಪೊಲೀಸರು

ಹಾವೇರಿ: ಫೈನಾನ್ಸ್ ಹಣ ಸಂಗ್ರಹಿಸಿಕೊಂಡು, ಬೈಕ್‍ನಲ್ಲಿ ಬರುತ್ತಿದ್ದ ಇಬ್ಬರನ್ನು ತಡೆದ ದುಷ್ಕರ್ಮಿಗಳು, ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ 1.28 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದರು. ಘಟನೆ ನಡೆದ 2 ದಿನಗಳಲ್ಲೇ ಪೊಲೀಸರು ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಜಿಲ್ಲೆಯ ರಟ್ಟೀಹಳ್ಳಿ ತಾಲೂಕು ಅಂಗರಗಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಎರಡು ದಿನಗಳಲ್ಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಚಂದನ್ ಕುಮಾರ್ ಯಲ್ಲಣ್ಣನವರ, ಕೇಶವ ಯಲ್ಲಣ್ಣನವರ ಹಾಗೂ ಅರುಣಕುಮಾರ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಬೈಕ್, 1.22 ಲಕ್ಷ ರೂ. ನಗದು ಹಾಗೂ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೊನ್ನಾಳಿ ದುರ್ಗಿ ಗುಡಿಯ ಚಂದನ್ ಅವರ ಸ್ನೇಹಿತ ಚಂದನ್‍ಕುಮಾರ್ ಆರೋಪಿ ಎಂಬುವರ ಜೊತೆ ಮೇದೂರ, ನಾಗವಂದ, ಅಂಗರಗಟ್ಟಿ ಗ್ರಾಮಗಳಲ್ಲಿ ಫೈನಾನ್ಸ್ ಹಣ ಸಂಗ್ರಹಿಸಿ, ಹಳ್ಯಾಳ ತಾಂಡಾದ ಕಡೆಗೆ ಬೈಕ್‍ನಲ್ಲಿ ಬರುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಹಣ ದರೋಡೆ ಮಾಡಿದ್ದರು. ಈ ಕೃತ್ಯದಲ್ಲಿ ಬೈಕ್‍ನಲ್ಲಿ ಕುಳಿತಿದ್ದ ಚಂದನ್ ಕುಮಾರ್ ನೇ ತನ್ನ ಸ್ನೇಹಿತರಿಗೆ ಹಣ ತರುತ್ತಿರುವ ವಿಷಯ ತಿಳಿಸಿ ಪೂರ್ವನಿಯೋಜಿತ ಸಂಚು ರೂಪಿಸಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *