ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದು ನಾನಲ್ಲ, ದೇವೇಗೌಡರಿಗೆ ಗೊತ್ತಿದ್ರೆ ಹೆಸರು ಹೇಳಲಿ- ಸಿದ್ದು ಸವಾಲು

– ದೇವೇಗೌಡರು ಪಾಪ ಎಂದ ಸಿದ್ದರಾಮಯ್ಯ

ಮೈಸೂರು: ಸಿಎಂ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ. ಯಾರು ಅವರ ಹೆಸರು ತಿರಸ್ಕಾರ ಮಾಡಿದರು ಎಂದು ಮಾಜಿ ಪ್ರಧಾನಿ ದೇವೇಗೌಡರೇ ಹೇಳಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಖರ್ಗೆ ಸಿಎಂ ಆಗುವ ಅವಕಾಶ ಇತ್ತು ಎಂಬ ದೇವೇಗೌಡರ ಹೇಳಿಕೆ ಪ್ರತಿಕ್ರಿಸಿದ ಸಿದ್ದರಾಮಯ್ಯ, ನಾನಂತು ಖರ್ಗೆ ಹೆಸರು ತಿರಸ್ಕಾರ ಮಾಡಿಲ್ಲ. ಯಾರು ಮಾಡಿದರು ಎಂದು ನನಗೆ ಗೊತ್ತಿಲ್ಲ. ದೇವೇಗೌಡರಿಗೆ ಗೊತ್ತಿದ್ದರೆ ಹೆಸರು ಹೇಳಲಿ ಎಂದು ಸವಾಲು ಎಸೆದರು.

ಸಿದ್ದರಾಮಯ್ಯ ಪಕ್ಷ ಕಟ್ಟಿಲ್ಲ ಎಂಬ ದೇವೇಗೌಡರ ಹೇಳಿಕೆ ಕುರಿತು ಮಾತನಾಡಿ, ದೇವೇಗೌಡರು ಪಾಪ, ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಅಂದುಕೊಂಡಿದ್ದೇನೆ. 1999ರಲ್ಲಿ ಜೆಡಿಎಸ್ ಅಧ್ಯಕ್ಷರಾಗಿದ್ದು ಯಾರು? 6 ವರ್ಷಗಳ ಕಾಲ ಜೆಡಿಎಸ್ ಅಧ್ಯಕ್ಷನಾಗಿದ್ದು ನಾನು. ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕುರುಬರನ್ನು ಎಸ್‍ಟಿ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಡಿಸೆಂಬರ್ 29ಕ್ಕೆ ಮೈಸೂರಿನಲ್ಲಿ ನಡೆಯುತ್ತಿರುವ ಹೋರಾಟ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೋರಾಟದ ಅಗತ್ಯವೇ ಇಲ್ಲ. ಇದು ಕುರುಬರನ್ನು ಇಬ್ಭಾಗ ಮಾಡುವ ಹುನ್ನಾರ. ನಾನು ಸಿಎಂ ಆಗಿದ್ದಾಗಲೇ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸು ಮಾಡಿದ್ದೆ. ಈಶ್ವರಪ್ಪ, ವಿಶ್ವನಾಥ್ ಇಬ್ಬರೂ ಬಿಜೆಪಿ ಸರ್ಕಾರದಲ್ಲಿದ್ದಾರೆ. ಎರಡೂ ಕಡೆ ಅವರದ್ದೇ ಸರ್ಕಾರ ಇದೆ. ಅವರು ಕುಲಶಾಸ್ತ್ರ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸು ಮಾಡಿಸಲಿ. ಇದು ಕುರುಬರನ್ನ ಇಬ್ಭಾಗ ಮಾಡುವ ಆರ್‍ಎಸ್‍ಎಸ್ ಹುನ್ನಾರವಾಗಿದೆ. ಇದಕ್ಕೆ ಹೋರಾಟದ ಅಗತ್ಯ ಇಲ್ಲ. ಯಾರ ವಿರುದ್ಧ ಹೋರಾಟ ಮಾಡುತ್ತಾರೆ? ಅವರದ್ದೇ ಸರ್ಕಾರದ ವಿರುದ್ಧ ಹೋರಾಟ ಯಾಕೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಗ್ರಾ.ಪಂ ಚುನಾವಣೆ ಹಿನ್ನೆಲೆ ವರುಣಾ ಹೋಬಳಿಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಗೆ ಆಗಮಿಸಿ ಸಿದ್ದರಾಮಯ್ಯ ಮತಚಲಾಯಿಸಿದರು. ಮಾಸ್ಕ್ ಧರಿಸಿ ಸಿದ್ದರಾಮನಹುಂಡಿ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 138ರಲ್ಲಿ ಮತ ಚಲಾವಣೆ ಮಾಡಿದರು.

Comments

Leave a Reply

Your email address will not be published. Required fields are marked *