ಕ್ಸಿಯೋಮಿಯನ್ನು ಸೋಲಿಸಿದ ಸ್ಯಾಮ್‌ಸಂಗ್‌ ಈಗ ನಂ. 1 ಕಂಪನಿ

– 2 ವರ್ಷದ ಬಳಿಕ ಮೊದಲ ಸ್ಥಾನಕ್ಕೆ ಏರಿಕೆ
– ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಬಗ್ಗೆ ಅಧ್ಯಯನ

ನವದೆಹಲಿ: ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕ್ಸಿಯೋಮಿಯನ್ನು ಸ್ಯಾಮ್‌ಸಂಗ್‌ ಸೋಲಿಸಿದೆ. ಈ ಮೂಲಕ ಎರಡು ವರ್ಷದ ಬಳಿಕ ಸ್ಯಾಮ್‌ಸಂಗ್‌ ಮೊದಲ ಸ್ಥಾನಕ್ಕೆ ಏರಿದೆ.

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್‌ಪಾಯಿಂಟ್‌ ಸಂಸ್ಥೆ 2020ರ ಮೂರನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ.

ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ ಹೊರತುಪಡಿಸಿ ನಂತರದ ನಾಲ್ಕು ಸ್ಥಾನಗಳನ್ನು ಅನುಕ್ರಮವಾಗಿ ಚೀನಾದ ಕ್ಸಿಯೋಮಿ,ವಿವೋ, ರಿಯಲ್‌ ಮೀ, ಒಪ್ಪೋ ಕಂಪನಿಗಳು ಪಡೆದುಕೊಂಡಿದೆ.

 

2019ರ ಮೂರನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಶೇ.20ರಷ್ಟು ಪಾಲನ್ನು ಹೊಂದಿದ್ದರೆ ಈ ಅವಧಿಯಲ್ಲಿ ಶೇ.24ಕ್ಕೆ ಏರಿಕೆಯಾಗಿದೆ. 2019ರಲ್ಲಿ ಕ್ಸಿಯೋಮಿ ಶೇ.26 ರಷ್ಟು ಪಾಲು ಹೊಂದಿದ್ದರೆ ಈ ಬಾರಿ ಶೇ.23ಕ್ಕೆ ಕುಸಿದಿದೆ.

ಉಳಿದಂತೆ ವಿವೋ ಶೇ.16, ರಿಯಲ್‌ ಮೀ ಶೇ.15, ಒಪ್ಪೋ ಶೇ.10, ಇತರೇ ಕಂಪನಿಗಳ ಫೋನ್‌ಗಳು ಮಾರುಕಟ್ಟೆಯಲ್ಲಿ ಶೇ.12 ರಷ್ಟು ಪಾಲನ್ನು ಹೊಂದಿವೆ.

ಸ್ಯಾಮ್‌ಸಂಗ್‌ ಆನ್‌ಲೈನ್‌ನಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದ್ದರಿಂದ ಮಾರಾಟ ಹೆಚ್ಚಳವಾಗಿದೆ. 2018ರ ಮೂರನೇ ತ್ರೈಮಾಸಿಕದಿಂದ ಕ್ಸಿಯೋಮಿ ಪ್ರತಿ ತ್ರೈಮಾಸಿಕದಲ್ಲೂ ಮೊದಲ ಸ್ಥಾನವನ್ನು ಉಳಿಸಿಕೊಂಡಿತ್ತು. ಆದರೆ ಈ ಬಾರಿ ಕೋವಿಡ್‌ 19ನಿಂದಾಗಿ ಬೇಡಿಕೆ ಇದ್ದರೂ ವಿತರಣೆಗೆ ಸಮಸ್ಯೆಯಾದ ಕಾರಣ ಮಾರುಕುಟ್ಟೆಯಲ್ಲಿ ಕುಸಿತ ಕಂಡಿದೆ. ರೆಡ್‌ಮೀ ನೋಟ್‌ 9 ಮತ್ತು ನೋಟ್‌ 9 ಸೀರಿಸ್‌ಗೆ ಬಹಳ ಬೇಡಿಕೆ ಇದೆ. ಹೀಗಾಗಿ ಮುಂದಿನ ದಿನದಲ್ಲಿ ಕ್ಸಿಯೋಮಿ ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಕೌಂಟರ್‌ಪಾಯಿಂಟ್‌ ಹೇಳಿದೆ.

 

ಪೋಕೋ ಫೋನ್‌ಗಳು ಸೇರಿ ಕ್ಸಿಯೋಮಿ ಮಾರುಕಟ್ಟೆಯನ್ನು ಲೆಕ್ಕ ಹಾಕಲಾಗಿದೆ. ಒಟ್ಟು 10 ಲಕ್ಷ ಪೊಕೋ ಫೋನ್‌ಗಳು ಮಾರಾಟವಾಗಿದೆ.

ಡಿಸ್ಪೇ ಮತ್ತು ಟಚ್‌ ಪ್ಯಾನೆಲ್‌ಗಳ ಮೇಲೆ ಶೇ.10 ಅಬಕಾರಿ ಸುಂಕ ಹೇರಿದ ಪರಿಣಾಮ ಮುಂದಿನ ತ್ರೈಮಾಸಿಕದಲ್ಲಿ ಫೋನ್‌ಗಳ ಬೆಲೆ ಹೆಚ್ಚಳವಾಗಲಿದೆ ಎಂದು ಕೌಂಟರ್‌ಪಾಯಿಂಟ್‌ ಅಂದಾಜಿಸಿದೆ.

ಈ ಅವಧಿಯಲ್ಲಿ ಒಟ್ಟು ದೇಶದಲ್ಲಿ 5.3 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.9ರಷ್ಟು ಫೋನ್‌ ಮಾರಾಟದಲ್ಲಿ ಏರಿಕೆಯಾಗಿದೆ. 10 ಸಾವಿರ -20 ಸಾವಿರ ರೂ. ಮಧ್ಯೆ  ಬೆಲೆ ಇರುವ ಫೋನ್‌ಗಳು ದೇಶದಲ್ಲಿ ಹೆಚ್ಚು ಮಾರಾಟ ಕಂಡಿದೆ.

Comments

Leave a Reply

Your email address will not be published. Required fields are marked *