ಕ್ಷಮಿಸಿ, ನಾನು ದಣಿದಿದ್ದೇನೆ – ಡೆತ್‍ನೋಟ್ ಬರೆದು 19ರ ಯುವತಿ ಆತ್ಮಹತ್ಯೆ

– ಪದೇ ಪದೇ ನಿಮ್ಮ ನಿರೀಕ್ಷೆಗಳನ್ನ ನಿರಾಶೆಗೊಳಿಸ್ತೇನೆ
– ನೀಟ್ ಪರೀಕ್ಷೆಗೆ ಒಂದು ದಿನದ ಮೊದಲೇ ಸೂಸೈಡ್

ಚೆನ್ನೈ: ನೀಟ್ ಆಕಾಂಕ್ಷಿಯಾಗಿದ್ದ 19 ವರ್ಷದ ಯುವತಿ ಪರೀಕ್ಷೆಗೆ ಒಂದು ದಿನದ ಮೊದಲೇ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ.

ಜ್ಯೋತಿಶ್ರೀ ದುರ್ಗಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಜ್ಯೋತಿ ತನ್ನ ಪೋಷಕರು ಮತ್ತು ಸಹೋದರನೊಂದಿಗೆ ಮಧುರೈನ ಸಶಸ್ತ್ರ ಪಡೆಗಳ ಮೀಸಲು ವಸತಿಗೃಹದಲ್ಲಿ ವಾಸಿಸುತ್ತಿದ್ದಳು. ಆಕೆಯ ತಂದೆ ಮುರುಗಸುಂದರಂ ಸಶಸ್ತ್ರ ಪಡೆಗಳ ಐದನೇ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜ್ಯೋತಿ ಕಳೆದ ವರ್ಷವೂ ನೀಟ್ ಪರೀಕ್ಷೆ ಬರೆದಿದ್ದು, ತೇರ್ಗಡೆಯಾಗದ ಕಾರಣ ಖಿನ್ನತೆಗೆ ಒಳಗಾಗಿದ್ದಳು. ಆದರೂ ಈ ವರ್ಷದ ಪರೀಕ್ಷೆ ಬರೆಯಲು ಸಾಕಷ್ಟು ತಯಾರಿ ನಡೆಸಿದ್ದಳು. ಆದರೆ ಪರೀಕ್ಷೆಯ ಭಯದಿಂದ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾಳೆ. ಇಂದು ಬೆಳಗ್ಗೆ ಪೋಷಕರು ಆಕೆಯ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಜ್ಯೋತಿ ನಮ್ಮೊಂದಿಗೆ ಶುಕ್ರವಾರ ರಾತ್ರಿ ಊಟ ಮಾಡುವಾಗ ಮಾತನಾಡಿಕೊಂಡು ಚೆನ್ನಾಗಿಯೇ ಇದ್ದಳು. ಊಟ ಮುಗಿಸಿ ತಮ್ಮ ರೂಮಿಗೆ ಹೋಗಿ ಮಲಗಿದ್ದಳು. ಇಂದು ಬೆಳಗ್ಗೆ ಎಷ್ಟು ಬಾರಿ ಬಾಗಿಲನ್ನು ತಟ್ಟಿದರೂ ರೂಮಿನಿಂದ ಹೊರಗೆ ಬರಲಿಲ್ಲ. ಫೋನ್ ಮಾಡಿದರೂ ರಿಸೀವ್ ಮಾಡಿಲ್ಲ. ಕೊನೆಗೆ ಬಾಗಿಲನ್ನು ಮುರಿದು ರೂಮಿಗೆ ಹೋಗಿ ನೋಡಿದಾಗ ಜ್ಯೋತಿ ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಳು. ಅಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿದ್ದಾಳೆ ಎಂದು ಕುಟುಂಬದರು ತಿಳಿಸಿದರು.

“ನೀವೆಲ್ಲರೂ ನನ್ನ ಮೇಲೆ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೀರಿ. ನಾನು ವೈದ್ಯಕೀಯ ಕೋರ್ಸಿಗೆ ಆಯ್ಕೆಯಾಗಲು ವಿಫಲವಾದರೆ, ನನಗಾಗಿ ನೀವು ಪಟ್ಟ ಶ್ರಮವೆಲ್ಲಾ ವ್ಯರ್ಥವಾಗುತ್ತದೆ. ಆದ್ದರಿಂದ ನಾನು ಪದೇ ಪದೇ ನಿಮ್ಮ ನಿರೀಕ್ಷೆಗಳನ್ನು ನಿರಾಶೆಗೊಳಿಸುತ್ತೇನೆ. ನನ್ನನ್ನು ಕ್ಷಮಿಸಿ, ನಾನು ದಣಿದಿದ್ದೇನೆ” ಎಂದು ಜ್ಯೋತಿ ಡೆತ್‍ನೋಟಿನಲ್ಲಿ ಬರೆದಿದ್ದಾಳೆ. ಅಲ್ಲದೇ, ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ. ಜೊತೆಗೆ ನಿಮ್ಮ ಪ್ರೀತಿಯನ್ನು ತಪ್ಪಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾಳೆ.

ನನ್ನ ಮಗಳು ಚೆನ್ನಾಗಿ ಓದುತ್ತಿದ್ದಳು. ಈ ಬಾರಿ ಪರೀಕ್ಷೆ ಬರೆದಿದ್ದರೆ ಅಧಿಕ ಅಂಕವನ್ನು ಪಡೆಯುತ್ತಿದ್ದಳು. ಆದರೆ ಜ್ಯೋತಿ ಖಿನ್ನತೆಗೆ ಒಳಗಾಗಿದ್ದು, ರಾತ್ರಿ ನಮ್ಮೊಂದಿಗೆ ಚೆನ್ನಾಗಿ ಮಾತನಾಡಿದ್ದಳು. ಆದರೆ ಬೆಳಗ್ಗೆ ಅವಳ ರೂಮಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ನಮಗೆ ತಿಳಿಯಿತು ಎಂದು ಜ್ಯೋತಿ ತಂದೆ ಹೇಳಿದ್ದಾರೆ.

ಕಳೆದ ವಾರ ಅರಿಯಲೂರು ಜಿಲ್ಲೆಯ ವಿಘ್ನೇಶ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನು. ವಿಘ್ನೇಶ್ ಈಗಾಗಲೇ ಎರಡು ಬಾರಿ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಉತ್ತೀರ್ಣವಾದರೂ ಕಾಲೇಜಿನಲ್ಲಿ ಸೀಟು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಭಯದಿಂದ ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಅದೇ ರೀತಿ ಕೊಯಮತ್ತೂರಿನಲ್ಲಿ 19 ವರ್ಷದ ಯುವತಿ ಕೂಡ ಪರೀಕ್ಷೆಯ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಳು.

Comments

Leave a Reply

Your email address will not be published. Required fields are marked *