ಕ್ವಾರಂಟೈನ್ ಕೇಂದ್ರದಲ್ಲಿದ್ದ ಬಾಲಕ ಸಾವು

ರಾಯಚೂರು: ಮಹಾರಾಷ್ಟ್ರದಿಂದ ಬಂದು ಜಿಲ್ಲೆಯ ದೇವದುರ್ಗದ ಕ್ವಾರಂಟೈನ್ ಕೇಂದ್ರದಲ್ಲಿದ್ದ ಬಾಲಕ ಇಂದು ಸಾವನ್ನಪ್ಪಿದ್ದಾನೆ.

ಮೃತ ಬಾಲಕ 14 ವರ್ಷದವನಾಗಿದ್ದು, ಮೂಲತಃ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದ ನಿವಾಸಿ. ತಂದೆ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರಿಂದ ಕುಟುಂಬವು ಅಂದೇರಿ ನಗರದಲ್ಲಿ ವಾಸವಾಗಿತ್ತು. ನಾಲ್ಕು ತಿಂಗಳ ಹಿಂದೆ ಮನೆಯಲ್ಲಿ ಕಾರ್ಯಕ್ರಮ ಇದೆ ಎಂದು ತಂದೆ-ತಾಯಿ, ತಂಗಿ ಮತ್ತು ತಮ್ಮ ಮದರಕಲ್ ಗ್ರಾಮಕ್ಕೆ ಬಂದಿದ್ದರು. ಆದರೆ ಪರೀಕ್ಷೆ ಇದ್ದರಿಂದ ಬಾಲಕ ಅಲ್ಲೇ ಉಳಿದುಕೊಂಡಿದ್ದ.

ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಲಾಗಿತ್ತು. ಬಸ್, ರೈಲು ಸಂಚಾರ ನಿಲ್ಲಿಸಿದ್ದರಿಂದ ಬಾಲಕ ಮುಂಬೈನಲ್ಲೇ ಉಳಿದಿದ್ದ. ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಮೇ 16ರಂದು ಮಹಾರಾಷ್ಟ್ರದಿಂದ ದೇವದುರ್ಗಕ್ಕೆ ಬಂದಿದ್ದ. ಹೀಗಾಗಿ ಆತನನ್ನು ದೇವದುರ್ಗದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಈ ವೇಳೆ ಬಾಲಕನ ಗಂಟಲು ದ್ರವವನ್ನು ಕೊರೊನಾ ಟೆಸ್ಟ್‌ಗೆ ಕಳುಹಿಸಿದಾಗ ರಿಪೋರ್ಟ್ ನೆಗೆಟಿವ್ ಬಂದಿತ್ತು.

ಬಾಲಕ ಕಳೆದ ಎರಡ್ಮೂರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಇಂದು ಹೊಟ್ಟೆ ನೋವು ಹೆಚ್ಚಾಗಿದ್ದ ಹಿನ್ನೆಲೆ ದೇವದುರ್ಗದಿಂದ ರಾಯಚೂರಿನ ಓಪಕ್ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಮತ್ತೆ ಕೊರೊನಾ ಟೆಸ್ಟ್‌ಗಾಗಿ ಬಾಲಕನ ಮೃತದೇಹದಿಂದ ಗಂಟಲು ದ್ರವವನ್ನು ತೆಗೆದು ಲ್ಯಾಬ್‍ಗೆ ಕಳುಹಿಸಲಾಗಿದೆ.

Comments

Leave a Reply

Your email address will not be published. Required fields are marked *