‘ಕ್ವಾರಂಟೈನ್ ಆಗಲು ನಾವು ಇಲ್ಲಿ ಬರ್ಬೇಕಿತ್ತಾ’- ದಿಲ್ಲಿಯಿಂದ ಬಂದವ್ರ ಆಕ್ರೋಶ

ಬೆಂಗಳೂರು: ದೆಹಲಿಯಿಂದ ಇಂದು ಸುಮಾರು 1 ಸಾವಿರ ಮಂದಿ ಬೆಂಗಳೂರಿಗೆ ರೈಲಿನಲ್ಲಿ ಆಗಮಿಸಿದ್ದಾರೆ. ಇದೀಗ ಅವರನ್ನು ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಲಾಗುತ್ತಿದ್ದು, ಪ್ರಯಾಣಿಕರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ನಮಗೆ ಕ್ವಾರಂಟೈನ್ ಮಾಡುವ ವಿಚಾರವೇ ಗೊತ್ತಿರಲಿಲ್ಲ. ಕ್ವಾರಂಟೈನ್ ಆಗಲು ನಾವು ಇಲ್ಲಿ ಬರಬೇಕಿತ್ತಾ ಇಂದು ಕಿಡಿಕಾರಿದ್ದಾರೆ.

ದೆಹಲಿಯಿಂದ ಬಂದ ಟ್ರೈನ್‍ನಲ್ಲಿ ಕುಡಿಯೋಕೆ ನೀರಿಲ್ಲ. ಟಾಯ್ಲೆಟ್ ನಲ್ಲಿ ಕೂಡ ನೀರು ಇರಲಿಲ್ಲ. ಇದೀಗ ಕ್ವಾರೆಂಟೈನ್ ಅಂತಾ ಓಡಾಡ್ತಿದ್ದಾರೆ. ದೆಹಲಿಯಿಂದ ಇಲ್ಲಿಗೆ ಬರುವ ತನಕ ಹಿಂಸೆಯಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಊಟ, ತಿಂಡಿ ಕೊಡಲೇಬೇಡಿ. ಕ್ವಾರೆಂಟೈನ್ ಮಾಡ್ತಾರೆ ಅಂತ ಗೊತ್ತೇ ಇರಲಿಲ್ಲ. ನಾವು ಬಡವರು, 1,800-2,000 ರೂ. ಹೋಟೆಲ್ ಗೆ ಹೇಳುತ್ತಿದ್ದಾರೆ. ನಾವು ಎಲ್ಲಿಂದ ಹಣ ತರುವುದು ದೆಹಲಿಯಿಂದ ಬಂದ ಮಹಿಳಾ ಪ್ರಯಾಣಿಕರೊಬ್ಬರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇಂದು ಬೆಳಗ್ಗೆ ಸುಮಾರು 6.40ಕ್ಕೆ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಕೇಂದ್ರ ಸರ್ಕಾರ ದೇಶಾದ್ಯಂತ 30 ವಿಶೇಷ ರೈಲು ಸಂಚಾರ ಆರಂಭಿಸಲು ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಮಂಗಳವಾರ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ರೈಲು ಹೊರಟಿತ್ತು. ರೈಲಿನಲ್ಲಿ ಸುಮಾರು 1,000 ಪ್ರಯಾಣಿಕರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ರೈಲು ಫ್ಲಾಟ್ ಫಾರಂ 1ಕ್ಕೆ ಬಂದಿದ್ದು, ಒಂದು ಬೋಗಿಯ ನಂತರ ಇನ್ನೊಂದು ಬೋಗಿಯಲ್ಲಿದ್ದ ಪ್ರಯಾಣಿಕರು ಇಳಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಎಲ್ಲಾ ಪ್ರಯಾಣಿಕರಿಗೆ ವೈದ್ಯರು ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ. ನಂತರ 11 ಬಿಎಂಟಿಸಿ ಬಸ್ಸುಗಳ ಮೂಲಕ ನಿಗದಿತ ಹೋಟೆಲ್‍ಗಳಿಗೆ ಕ್ವಾರಂಟೈನ್‍ಗೆ ಪೊಲೀಸರು ಕರೆದುಕೊಂಡು ಹೋಗಲಿದ್ದಾರೆ.

ಪ್ರತಿ ಬಸ್ಸಿನಲ್ಲಿ 25 ಮಂದಿ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಲ್ಲದೆ ಪ್ರತಿಯೊಬ್ಬ ಪ್ರಯಾಣಿಕರಿಗೂ 50 ರೂ. ಚಾರ್ಜ್ ನಿಗದಿಪಡಿಸಲಾಗಿದೆ. ಕ್ವಾರಂಟೈನ್ ಕರೆದುಕೊಂಡು ಹೋಗುವ ಬಸ್ ಚಾಲಕರಿಗೆ ಗ್ಲೌಸ್, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಒಟ್ಟಿನಲ್ಲಿ ದೆಹಲಿಯಿಂದ ಬಂದ ಎಲ್ಲಾ ಪ್ರಯಾಣಿಕರು 14 ದಿನದವರೆಗೂ ಖಾಸಗಿ ಹೋಟೆಲ್‍ನಲ್ಲೇ ವಾಸ್ತವ್ಯ ಇರಬೇಕಾಗುತ್ತದೆ.

Comments

Leave a Reply

Your email address will not be published. Required fields are marked *