ಕ್ವಾರಂಟೈನ್‍ನಿಂದ 206 ಜನ ತಪ್ಪಿಸಿಕೊಂಡ ಪ್ರಕರಣ- ಮೊಬೈಲ್ ಸಂಖ್ಯೆ ಎಡವಟ್ಟು ಎಂದ ಎಸ್‍ಪಿ

– ಕ್ವಾರಂಟೈನ್ ಕೇಂದ್ರದಿಂದ ಯಾರೂ ಪರಾರಿಯಾಗಿಲ್ಲ ಎಸ್‍ಪಿ ಸ್ಪಷ್ಟನೆ
– ತಪ್ಪಾದ ಮೊಬೈಲ್ ಸಂಖ್ಯೆಗಳಿಂದ ಗೊಂದಲ

ರಾಯಚೂರು: ಜಿಲ್ಲೆಯ ಕ್ವಾರಂಟೈನ್ ಕೇಂದ್ರದಿಂದ 206 ಜನ ತಪ್ಪಿಸಿಕೊಂಡಿದ್ದಾರೆ ಎಂದು ಬೆಂಗಳೂರಿನಲ್ಲಿನ ರಾಜ್ಯದ ಕೋವಿಡ್ ವಾರ್ ರೂಮ್‍ನಿಂದ ಮಾಹಿತಿ ಬಂದಿದ್ದು, ಜಿಲ್ಲೆಯ ಜನ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಆದರೆ ಕೊರಂಟೈನ್ ಕೇಂದ್ರಗಳಿಂದ ಯಾರೂ ತಪ್ಪಿಸಿಕೊಂಡಿಲ್ಲ, ಎಲ್ಲರೂ ಆಯಾ ಕೇಂದ್ರಗಳಲ್ಲೇ ಇದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ಆಧಾರದ ಮೇಲೆ ಮಸ್ಕಿ ಠಾಣೆಯಲ್ಲಿ ಮೂರು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ 206 ಜನರ ವಿವರಗಳನ್ನು ಪರಿಶೀಲಿಸಿದಾಗ ಕೆಲವರು ಮೊಬೈಲ್ ನಂಬರ್ ತಪ್ಪಾಗಿ ಕೊಟ್ಟಿರುವುದು, ಇನ್ನೂ ಕೆಲವರು ತಮ್ಮ ಮಕ್ಕಳ, ಸಂಬಂಧಿಕರ ಹಾಗೂ ತಮ್ಮ ಪರಿಚಯದವರ ನಂಬರ್ ಕೊಟ್ಟಿರುವುದು ಕಂಡು ಬಂದಿದೆ. ಕರೆ ಮಾಡಿದಾಗ ಅವರಿಗೆ ಕರೆ ಹೋಗಿದೆ. ಆದರೆ ಹೊರರಾಜ್ಯದಿಂದ ಬಂದವರನ್ನು ಪರಿಶೀಲನೆ ಮಾಡಿದಾಗ ಕ್ವಾರಂಟೈನ್ ನಲ್ಲಿಯೇ ಇದ್ದಾರೆ. ಟವರ್ ಲೊಕೆಷನ್ ನಿಂದ ಸುಮಾರು 30 ಕಿ.ಮೀ. ದೂರದವರೆಗೆ ರೇಂಜ್ ಕಂಡು ಬಂದಿದೆ. ಆದರೆ ಇಲ್ಲಿಯವರೆಗೆ ಯಾರೂ ಹೊರಗೆ ಹೋಗಿರುವದು ಕಂಡು ಬಂದಿಲ್ಲ ಎಂದು ಎಸ್.ಪಿ. ಹೇಳಿದ್ದಾರೆ.

ಈ ಕುರಿತು ಈಗಾಗಲೇ ವಿಚಾರಣೆ ಮುಂದುವರೆದಿದೆ. ಯಾರಾದರೂ ತಪ್ಪಿಸಿಕೊಂಡು ಹೋಗಿದ್ದರೆ, ಅವರನ್ನು ಹುಡುಕಿ ಮರಳಿ ಕ್ವಾರಂಟೈನ್‍ಗೆ ದಾಖಲಿಸಿ, ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವದು. ಹೀಗಾಗಿ ಸಾರ್ವಜನಿಕರು ಅವಧಿ ಪೂರ್ಣಗೊಳ್ಳುವವರೆಗೆ ಕ್ವಾರಂಟೈನ್ ಕೇಂದ್ರದಿಂದ ಹೊರಗಡೆ ಬರಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *