ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

ಅಬುಧಾಬಿ: ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಾಯಕತ್ವ ಲಕ್ಷಣಗಳನ್ನು ಗಮನಿಸಿದ್ದು, ಸಾಕಷ್ಟು ಕಲಿತಿದ್ದೇನೆ. ಈ ಬಾರಿಯ ಟೂರ್ನಿಯಲ್ಲಿ ಅವುಗಳನ್ನು ಅಳವಡಿಸಿಕೊಳ್ಳುತ್ತೇನೆ ಎಂದು ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿರುವ ಬಗ್ಗೆ ಮಾತನಾಡಿರುವ ಕೆಎಲ್ ರಾಹುಲ್, ಧೋನಿ, ಕೊಹ್ಲಿ ರೋಹಿತ್ ಅವರೊಂದಿಗೆ ಕಳೆದ 10 ವರ್ಷಗಳಿಂದ ಆಡುತ್ತಿದ್ದು, ಅವರ ನಾಯಕತ್ವದಲ್ಲಿ ಆಡಲು ನನಗೆ ಅವಕಾಶ ಲಭಿಸಿದೆ. ಕೊಹ್ಲಿ, ಧೋನಿ ವ್ಯಕ್ತಿಗತವಾಗಿ ಭಿನ್ನವಾಗಿದ್ದರೂ, ತಂಡವನ್ನು ಮುನ್ನಡೆಸುವ ವಿಚಾರದಲ್ಲಿ ಒಂದೇ. ಆದರೆ ಆ ಪದ್ಧತಿಗಳು ಮಾತ್ರ ಬೇರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಇತ್ತ ಸಾಕಷ್ಟು ಅನುಭವವನ್ನು ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ತಮ್ಮ ಪಕ್ಕದಲ್ಲೇ ಇರುವುದು ಸಾಕಷ್ಟು ಸಂತಸ ತಂದಿದೆ ಎಂದಿದ್ದಾರೆ.

ಕೊರೊನಾ ಕಾರಣದಿಂದ ಕ್ರಿಕೆಟ್‍ನಿಂದ ಸಾಕಷ್ಟು ಸಮಯ ದೂರ ಉಳಿದ ಕಾರಣ ಸ್ಪಲ್ಪ ಆತಂಕ ಎದುರಾಗಿತ್ತು. ಆದರೆ ಯಾವುದೇ ರೀತಿಯ ಭಯವಿಲ್ಲ. ಮೂರು ವಾರಗಳಲ್ಲಿ ಲಯಕ್ಕೆ ಮರಳಬೇಕಿದೆ. ಅಲ್ಲದೇ ಮನಸ್ಸು ಮತ್ತು ಶರೀರದ ಸಮನ್ವಯ ಸಾಧಿಸಬೇಕಿದೆ ಎಂದಿದ್ದಾರೆ. ಕೆಎಲ್ ರಾಹುಲ್ ಕಳೆದ ಎರಡು ಆವೃತ್ತಿಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿದ್ದು, ಈ ಬಾರಿಗೆ ಅವರಿಗೆ ತಂಡದ ನಾಯತ್ವದ ಜವಾಬ್ದಾರಿ ವಹಿಸಿಕೊಳ್ಳುವ ಅವಕಾಶ ಲಭಿಸಿದೆ. ಈಗಾಗಲೇ ಟೂರ್ನಿಗಾಗಿ ಯುಎಇಗೆ ತೆರಳಿರುವ ತಂಡದ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿ ತರಬೇತಿಯನ್ನು ಆರಂಭಿಸಿದೆ.

Comments

Leave a Reply

Your email address will not be published. Required fields are marked *