ಕ್ಯಾನ್ಸರ್ ಗೆದ್ದ ಬಾಲೆಗೆ ಕೊರೊನಾ ಗೆಲ್ಲಲು ಆಗಲಿಲ್ಲ- ಸೋಂಕಿಗೆ 2 ವರ್ಷದ ಕಂದಮ್ಮ ಸಾವು

ಬೆಂಗಳೂರು: ಕ್ಯಾನ್ಸರ್ ಗೆದ್ದ 2 ವರ್ಷದ ಬಾಲಕಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎರಡು ವರ್ಷದ ಬಾಲಕಿಯ ಸಾವಿನ ಕಥೆ ಎಂತವರ ಕಣ್ಣಲ್ಲಿಯೂ ಕಣ್ಣೀರು ತರಿಸುತ್ತೆ.

ಮೂಲತಃ ಪಶ್ಚಿಮ ಬಂಗಾಳ ಮೂಲದ ದಂಪತಿಯ ಎರಡು ವರ್ಷದ ಮಗು ಬ್ಲಡ್ ಕ್ಯಾನ್ಸರಿನಿಂದ ಬಳಲುತ್ತಿತ್ತು. 2019 ಡಿಸೆಂಬರ್ ನಲ್ಲಿ ಮಗುವನ್ನು ದಂಪತಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಕ್ಯಾನ್ಸರಿನಿಂದ ಚೇತರಿಕೆ ಕಾಣುತ್ತಿದ್ದಳು. ಇನ್ನೇನು ಬದುಕುವ ಆಸೆ ಚಿಗುರಿಕೊಂಡಾಗಲೇ ಮಗುವಿಗೆ ಕೊರೊನಾ ಹೆಮ್ಮಾರಿ ವಕ್ಕರಿಸಿತ್ತು.

ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಮಗು ಕಳೆದ ಶನಿವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು. ಪಶ್ಚಿಮ ಬಂಗಾಳ ಮೂಲದ ದಂಪತಿಯಾದ ಕಾರಣದಿಂದ ಅವರಿಗೆ ಬೆಂಗಳೂರಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸುವ ಬಗ್ಗೆಯೂ ಮಾಹಿತಿ ಇರಲಿಲ್ಲ. ಈ ವೇಳೆ ದಂಪತಿಯ ನೆರವಿಗೆ ಬಂದ ಆಸ್ಪತೆಯ ಸಿಬ್ಬಂದಿ ಸ್ವಯಂ ಸೇವಕರಾದ ಜಮೈದ್ ರೆಹಮಾನ್, ಅಬ್ದುಲ್ ರಜಾಕ್ ತಂಡಕ್ಕೆ ಮಾಹಿತಿ ನೀಡಿದ್ದರು.

ಕೂಡಲೇ ಮಗುವಿನ ಅಂತ್ಯಸಂಸ್ಕಾರಕ್ಕೆ ನೆರವಾದ ಸ್ವಯಂ ಸೇವಕರು ಆಂಬುಲೆನ್ಸ್ ಮೂಲಕ ಮೃತದೇಹವನ್ನು ಸ್ಮಶಾನಕ್ಕೆ ತಂದಿದ್ದರು. ಮೊದಲ ಬಾರಿಗೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ಮಗುವಿನ ಅಂತ್ಯಸಂಸ್ಕಾರ ಮಾಡಿದ ಯುವಕರು ಭಾವುಕರಾಗಿದ್ದರು. ಕೊರೊನಾ ಸೋಂಕಿತರ ಮೃತದೇಹವನ್ನು ಸ್ಪರ್ಶಿಸದೆ ಅಂತ್ಯಸಂಸ್ಕಾರ ನಡೆಸುತ್ತಿದ್ದ ಯುವಕರು ಮಗುವನ್ನು ಕೈಯಲ್ಲಿ ಎತ್ತಿಕೊಂಡು ಸಾಗಿದ್ದರು. ಘಟನೆ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಜಮೈದ್ ರೆಹಮಾನ್, ದಯಮಾಡಿ ನಿಮ್ಮ ಮಕ್ಕಳನ್ನು ಕೊರೊನಾದಿಂದ ಕಾಪಾಡಿಕೊಳ್ಳಿ. ಸದಾ ಎಚ್ಚರ ವಹಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.

Comments

Leave a Reply

Your email address will not be published. Required fields are marked *