ಕೋವಿಶೀಲ್ಡ್, ಕೋವ್ಯಾಕ್ಸಿನ್ ಮಿಶ್ರ ಲಸಿಕೆ ಪಡೆದರೆ ಅಡ್ಡಪರಿಣಾಮವಿಲ್ಲ: ಐಸಿಎಂಆರ್

ಬೆಂಗಳೂರು/ನವದೆಹಲಿ: ಒಂದು ಡೋಸ್ ಕೋವಿಶೀಲ್ಡ್ ಹಾಗೂ ಇನ್ನೊಂದು ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡುವುದರಿಂದ ಕೊರೋನಾದ ವಿರುದ್ಧ ದೇಹದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಸೃಷ್ಟಿಯಾಗುತ್ತದೆ ಎಂದು ಭಾರತದಲ್ಲಿ ನಡೆದ ಮೊದಲ ಅಧಿಕೃತ ಅಧ್ಯಯನದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸಿದೆ.

ಉತ್ತರ ಪ್ರದೇಶದ ಒಟ್ಟು 98 ಜನರ ಮೇಲೆ ಈ ಪ್ರಯೋಗ ನಡೆಸಲಾಗಿದ್ದು, ಇವರಲ್ಲಿ ಅಚಾತುರ್ಯದಿಂದ ಮೊದಲ ಡೋಸ್ ಕೋವಿಶೀಲ್ಡ್ ಹಾಗೂ ಎರಡನೇ ಡೋಸ್ ಕೋವ್ಯಾಕ್ಸಿನ್ ಪಡೆದ 18 ಜನರು ಸೇರಿದ್ದಾರೆ. ಇನ್ನುಳಿದ 80 ಜನರಲ್ಲಿ 40 ಜನರಿಗೆ ಮೊದಲ ಡೋಸ್ ಕೋವಿಶೀಲ್ಡ್ ಹಾಗೂ ಎರಡನೇ ಡೋಸ್ ಕೋವ್ಯಾಕ್ಸಿನ್ ನೀಡಲಾಗಿತ್ತು. ಇತರ 40 ಜನರಿಗೆ ಎರಡೂ ಡೋಸ್ ಒಂದೇ ಲಸಿಕೆ ನೀಡಲಾಗಿತ್ತು. ಎರಡು ಡೋಸ್ ಪಡೆದ ನಿರ್ದಿಷ್ಟ ಸಮಯದ ನಂತರ ಪರೀಕ್ಷೆ ನಡೆಸಿದಾಗ ಬೆರಕೆ ಲಸಿಕೆ ಪಡೆದವರಲ್ಲಿ ಒಂದೇ ಲಸಿಕೆಯ ಎರಡು ಡೋಸ್ ಪಡೆದವರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಕಂಡುಬಂದಿದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ತಂತ್ರಜ್ಞಾನ ಬೇರೆಬೇರೆಯಾಗಿದೆ. ಒಂದು ಅಡೆನೋವೈರಸ್ ಲಸಿಕೆಯಾಗಿದ್ದರೆ, ಇನ್ನೊಂದು ಮೃತ ವೈರಸ್‍ಗಳನ್ನು ಬಳಸಿ ತಯಾರಿಸಿದ ಲಸಿಕೆಯಾಗಿದೆ. ಆದರೂ ಈ ಎರಡು ಲಸಿಕೆಗಳ ತಲಾ ಒಂದೊಂದು ಡೋಸ್ ಪಡೆಯುವುದರಿಂದ ಯಾವುದೇ ಹೆಚ್ಚಿನ ಅಡ್ಡಪರಿಣಾಮ ಉಂಟಾಗುವುದಿಲ್ಲ. ಈ ಲಸಿಕೆಗಳ ಮಿಶ್ರಣ ಸುರಕ್ಷಿತ. ಒಂದೇ ಲಸಿಕೆಯ ಎರಡು ಡೋಸ್ ಪಡೆದಾಗ ಯಾವ ರೀತಿಯ ಅಡ್ಡಪರಿಣಾಮಗಳು ಕಂಡುಬಂದಿವೆಯೋ ಅಂತಹವೇ ಅಡ್ಡಪರಿಣಾಮಗಳು ಮಿಶ್ರ ಲಸಿಕೆ ಪಡೆದಾಗಲೂ ಕಂಡುಬಂದಿವೆ ಎಂದು ವರದಿ ಹೇಳಿದೆ.

ದೇಶದಲ್ಲಿ ಲಸಿಕಾ ಅಭಿಯಾನ ವೇಗವಾಗಿ ನಡೆಯುತ್ತಿರುವಾಗ ಅಚಾತುರ್ಯದಿಂದ ಎರಡು ಜಾತಿಯ ಲಸಿಕೆಗಳ ಬೆರಕೆಯಾದರೆ ಜನರಿಗೆ ಉಂಟಾಗಬಹುದಾದ ಆತಂಕದ ಹಿನ್ನೆಲೆಯಲ್ಲಿ ಈ ಅಧ್ಯಯನ ನಡೆಸಿರುವುದಾಗಿ ಐಸಿಎಂಆರ್ ಹೇಳಿಕೊಂಡಿದೆ.

Comments

Leave a Reply

Your email address will not be published. Required fields are marked *