ಕೋವಿಡ್ ಸೋಂಕಿತರ ಸಹಾಯಕ್ಕಾಗಿ ಆಟೋ ಓಡಿಸುತ್ತಿರುವ ಶಿಕ್ಷಕ

ಮುಂಬೈ: ಕೊರೊನಾ ವೈರಸ್ ಎರಡನೇ ಅಲೆ ಮಧ್ಯೆ, ಮುಂಬೈನ ಶಾಲಾ ಶಿಕ್ಷಕರೊಬ್ಬರು ಕೋವಿಡ್ ಸೋಂಕಿತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿರುವ ದತ್ತಾತ್ರೇಯ ಸಾವಂತ್ ಆಟೋ ಓಡಿಸುತ್ತಿದ್ದಾರೆ. ಮುಂಜಾಗ್ರತೆ ಕ್ರಮಗಳೊಂದಿಗೆ ಪಿಪಿಇ ಕಿಟ್ ಧರಿಸಿ, ವಾಹನವನ್ನು ಸ್ಯಾನಿಟೈಸ್‍ಗೊಳಿಸಿ, ಸೋಂಕಿತರನ್ನು ಆಸ್ಪತ್ರೆ, ಕೋವಿಡ್ ಕೇಂದ್ರ ಮತ್ತು ಮನೆಗಳಿಗೆ ಕರೆದೊಯ್ಯುತ್ತಿದ್ದಾರೆ.

ಈ ಕುರಿತಂತೆ ಮಾತನಾಡಿದ ಅವರು, ನಾನು ವೈಯಕ್ತಿಕವಾಗಿ ಬೇಕಾದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಪ್ರಸ್ತುತ ಕೊರೊನಾ ಸೋಂಕಿತರ ಸಂಖ್ಯೆ ಅತೀ ವೇಗವಾಗಿ ಹೆಚ್ಚಾಗುತ್ತಿದೆ. ಅನೇಕ ಮಂದಿ ಚಿಕಿತ್ಸೆ ಕೊರತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಡ ರೋಗಿಗಳು ಸರ್ಕಾರದಿಂದ ಸರಿಯಾದ ಸಮಯಕ್ಕೆ ಸಹಾಯ ಪಡೆಯುತ್ತಿದ್ದಾರೋ ಇಲ್ಲವೋ, ಖಾಸಗಿ ಅಂಬುಲೆನ್ಸ್ ಕೂಡ ಕೈಗೆಟಕುವಂತಿಲ್ಲ. ಸಾಮಾನ್ಯವಾಗಿ ಸಾರ್ವಜನಿಕ ವಾಹನಗಳು ಕೋವಿಡ್ ಸೋಂಕಿತರಿಗೆ ಸೇವೆಯನ್ನು ಒದಗಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ನನ್ನ ಕಡೆಯಿಂದ ಸೋಕಿಂತರಿಗೆ ಉಚಿತವಾಗಿ ಸೇವೆ ಲಭ್ಯವಿರುತ್ತದೆ.

ನಾನು ಕೊರೊನಾ ಸೋಂಕಿತರನ್ನು ಕೋವಿಡ್ ಕೇಂದ್ರ, ಆಸ್ಪತ್ರೆಗಳಿಗೆ ಉಚಿತವಾಗಿ ಕರೆದುಕೊಂಡು ಹೋಗಿ ಬಿಡುತ್ತೇನೆ ಮತ್ತು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಂತಹ ರೋಗಿಗಳನ್ನು ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದೇನೆ ಎಂದು ಹೇಳಿದ್ದಾರೆ.

ದತ್ತಾತ್ರೇಯ ಸಾವಂತ್‍ರವರು ಮುಂಬೈ ಉಪನಗರ ಘಾಟ್ಕೋಪರ್ ನಿವಾಸಿಯಾಗಿದ್ದು, ಜ್ಞಾನಸಾಗರ್ ವಿದ್ಯಾ ಮಂದಿರ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸಾವಂತ್ ಕಳೆದ ಕೆಲವು ದಿನಗಳಿಂದ ಈಶಾನ್ಯ ಮುಂಬೈನಲ್ಲಿ ಆಟೋ ಓಡಿಸುವ ಮೂಲಕ ಜನರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿಯವರೆಗೂ 26 ಕೋವಿಡ್ ಸೋಂಕಿತರಿಗೆ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲರೂ ಇದೀಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಕೋವಿಡ್ ಕಡಿಮೆಯಾಗುವವರೆಗೂ ತಮ್ಮ ಸೇವೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *