ಕೋವಿಡ್ ಬರೋಕೆ ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ: ಸಿದ್ದರಾಮಯ್ಯ

– ಯಡಿಯೂರಪ್ಪ ಮಾಡಿದ್ದು ತಿಥಿ ಊಟ, ಮದ್ವೆಯದ್ದು ಅಲ್ಲ
– ಬಿಎಸ್‍ವೈಗೆ ಮುಂಬಾಗಿಲಿನಿಂದ ಬಂದು ಗೊತ್ತಿಲ್ಲ

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗ ನಾವು ಕಂಡು, ಕೇಳಿರಲಿಲ್ಲ. ಚೀನಾದಿಂದ ನಮ್ಮ ದೇಶಕ್ಕೆ ಬಂದಿದೆ. ಕೋವಿಡ್ ಬರೋಕೆ ನಾವು ಕಾರಣನಾ? ಯಾರು ಸರ್ಕಾರ ನಡೆಸುತ್ತಾರೋ ಅವರೇ ಕಾರಣ ಎಂದು ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ಪದ್ಮನಾಭ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಈ ಕ್ಷೇತ್ರದಲ್ಲಿ ಕೋವಿಡ್ ಬರೋಕೆ ಆರ್. ಅಶೋಕ್ ಕಾರಣ. ಅವರು ಸಿಎಂ ಆಗದೆ ಇರಬಹುದು. ಆದರೆ ಈ ಹಿಂದೆ ಕಂದಾಯ ಸಚಿವರಾಗಿದ್ದರು. ಅಶೋಕ್ ಅವರನ್ನು ಅನೇಕ ಬಾರಿ ಗೆಲ್ಲಿಸಿದ್ದೀರಿ. ಜನರಿಗೆ ಆಹಾರ, ಔಷಧಿ, ಬೆಡ್ ಗಳು ಕೊಡುವುದು ಅಶೋಕ್ ಜವಾಬ್ದಾರಿ ಆದರೆ ಅವರು ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇಲ್ಲಿ ಕಾರ್ಯಕ್ರಮ ನಡೆಸಲು ಅಶೋಕ್ ಅನುಮತಿ ಪಡೆಯಬೇಕಂತೆ. ಈ ಮೈದಾನ ಏನೂ ಅಶೋಕ್ ಅವರ ಅಪ್ಪನ ಮನೆ ಆಸ್ತಿನಾ. ಇದು ಪಬ್ಲಿಕ್ ಪ್ರಾಪರ್ಟಿ. ಅಧಿಕಾರಿಗಳು ಇದಕ್ಕೆ ಮಣೆ ಹಾಕಬಾರದು. ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಗಳು ಎಚ್ಚರಿಯಿಂದ ಇರಬೇಕು. ಅಶೋಕ್ ಒಬ್ಬ ಶಾಸಕ ಅಷ್ಟೇ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಿನ 32 ಕಡೆ ಕೊರೊನಾ ಸ್ಫೋಟ

ತಿಥಿ ಊಟ ಮಾಡಿದವರು:
ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ತೆಗೆದು ಹಾಕಿದ್ದಾರೆ. ವಯಸ್ಸು ಆಗಿದೆ ಎಂದು ತೆಗೆದಿಲ್ಲ. ಬದಲಾಗಿ ದುಡ್ಡು ಹೊಡೆದ್ರು ಅಂತಾ ತೆಗೆದಿದ್ದು. ಅಪ್ಪ – ಮಗ ಸೇರಿ ಲೂಟಿ ಮಾಡಿದ್ರು ಅಂತ ತೆಗೆದ್ರು ಐಟಿ, ಇಡಿ ಕೇಸ್ ಇದೆ ಎಂದು ಹೇಳಿ ಕೆಳಗಿಳಿಸಿದ್ದಾರೆ. ಆರ್.ಟಿ.ಜಿಎಸ್ ಮೂಲಕ ಹಣ ತೆಗೆದುಕೊಂಡಿದ್ದಾರೆ. ಯಡಿಯೂರಪ್ಪ ಮದುವೆ ಊಟ ಮಾಡೇ ಇಲ್ಲ. ಬರೀ ತಿಥಿ ಊಟ ಮಾಡಿದವರು ಅವರು. ಅವರಿಗೆ ಮುಂಬಾಗಿಲಿಂದ ಬಂದು ಗೊತ್ತೇ ಇಲ್ಲ. ಹಿಂಬಾಗಿಲಿಂದ ಬಂದವರು ಅವರು. ನಮ್ಮ ಎಂಎಲ್‍ಎಗಳನ್ನು ಕರೆಕೊಂಡು ಸರ್ಕಾರ ಮಾಡಿದ್ದಾರೆ. ಬೊಮ್ಮಾಯಿ ಬಗ್ಗೆ ಈಗ ಮಾತಾಡಲ್ಲ. ಹೋಗಲಿ ಮೂರ್ನಾಲ್ಕು ತಿಂಗಳು ಆಮೇಲೆ ಅವರ ಬಗ್ಗೆ ಮಾತಾಡುತ್ತೇನೆ. ಬೊಮ್ಮಾಯಿಯನ್ನು ಸಿಎಂ ಮಾಡಿದ್ದು ಯಡಿಯೂರಪ್ಪ ಹಾಗಾಗಿ ಸ್ಟ್ಯಾಂಪ್ ಆಗವುದು ಬಿಟ್ಟು ಅವರು ಏನು ಮಾಡುತ್ತಾರೆ. ಬೊಮ್ಮಾಯಿ ಸಿಎಂ ಆದರು ಏನು ಬದಲಾವಣೆ ಆಗಲ್ಲ. ಭ್ರಷ್ಟ ಸರ್ಕಾರವಿದು ಎಂದು ಟೀಕೆ ವ್ಯಕ್ತಪಡಿಸಿದರು.

ಈ ಬದಲಾವಣೆ ಮಾಡಿ:
ಪದ್ಮನಾಭ ನಗರದಲ್ಲಿ ನಮ್ಮನ್ನು ಸೋಲಿಸಿದ್ದೀರಿ. ಅಶೋಕ್ ಅವರನ್ನು ಗೆಲ್ಲಿಸಿದ್ದೀರಿ. ಆರು ಬಾರಿ ಗೆಲ್ಲಿಸಿದ್ದೀರಿ. ನಿಮ್ಮ ದಮ್ಮಯ್ಯ ಅಂತಿನಿ ಈ ಬಾರಿ ಬದಲಾವಣೆ ಮಾಡಿ. ಈ ವೇಳೆ ಒಳ್ಳೆಯ ಕ್ಯಾಂಡಿಡೇಟ್ ಬೇಕು ಎಂದು ಕಾರ್ಯಕರ್ತರು ಕಿರುಚಿದರು. ಒಳ್ಳೆಯ ಕ್ಯಾಂಡಿಡೇಟ್ ಕೊಡುತ್ತೇವೆ ಈ ಸಾರಿ ಎಂದರು. ಇದಕ್ಕೆ ನೀವೇ ಸ್ಪರ್ಧೆ ಮಾಡಿ ಎಂದು ಕಾರ್ಯಕರ್ತರು ಕೂಗಿದರು. 224 ಕ್ಷೇತ್ರದಲ್ಲೂ ನಾನೇ ನಿಲ್ಲೋಕೆ ಆಗಲ್ಲ. ನಾನು ಈಗ ಬಾದಾಮಿ ಶಾಸಕ. ಬಾದಾಮಿಯಿಂದ ನಿಲ್ಲುತ್ತೇನೆ. ಚುನಾವಣೆಗೆ ಹೋಗೋಕೆ ನಾವು ಸಿದ್ಧರಾಗಿದ್ದೇವೆ.

Comments

Leave a Reply

Your email address will not be published. Required fields are marked *