ಕೋವಿಡ್ ನಿರ್ಲಕ್ಷ್ಯ ಮಾಡಿದವರಿಗೆ ಐಸಿಯು, ವೆಂಟಿಲೇಟರ್ ಸಿಗಲ್ಲ- ಉಡುಪಿ ಜಿಲ್ಲಾಡಳಿತ

ಉಡುಪಿ: ಜಿಲ್ಲೆಯಲ್ಲಿ 1,300 ಆಕ್ಸಿಜನ್ ಬೆಡ್ ಗಳು ಇವೆ. ಆಮ್ಲಜನಕ ಕೊಡುವುದಕ್ಕೆ ಸರಕಾರ ಬದ್ಧವಿದೆ. ವೆಂಟಿಲೇಟರ್ ಚಿಕಿತ್ಸೆ ಕೊಡಲು ನಮ್ಮಲ್ಲಿ ಅವಕಾಶ ಇದೆ. ಆದರೆ ಮನೆಯಿಂದ ನೇರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವವರಿಗೆ ವೆಂಟಿಲೇಟರ್ ಕೊಡುವುದಿಲ್ಲ ಎಂದು ಉಡುಪಿ ಜಿಲ್ಲಾಡಳಿತದ ಸ್ಪಷ್ಟಪಡಿಸಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ವಿಪರೀತವಾಗಿದೆ. ಪ್ರತಿದಿನ ಜಿಲ್ಲೆಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಕೇಸುಗಳು ದಾಖಲಾಗುತ್ತಿದೆ. ಕೊರೊನಾ ಪರಿಸ್ಥಿತಿ ಕೈಮೀರುವ ಈ ಸಂದರ್ಭದಲ್ಲಿ ಉಡುಪಿ ಡಿಸಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಆರಂಭದಲ್ಲಿ ನಿರ್ಲಕ್ಷ್ಯ ಮಾಡಬೇಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಎಷ್ಟು ವೆಂಟಿಲೇಟರ್ ತಯಾರು ಮಾಡಿದರೂ ಸಾಕಾಗದ ಸ್ಥಿತಿ ಇದೆ. ಜನರ ನಿರ್ಲಕ್ಷಕ್ಕೆ ನಾವು ಜವಾಬ್ದಾರರಲ್ಲ. ರೋಗ ಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ಆರಂಭದಲ್ಲಿ ಆಕ್ಸಿಜನ್ ಕೊಟ್ಟು ಜೀವ ಉಳಿಸುವ ಅವಕಾಶ ಇದೆ. ಗಂಭೀರ ಆದಲ್ಲಿ ಐಸಿಯು, ವೆಂಟಿಲೇಟರ್‍ಗೆ ಶಿಫ್ಟ್ ಮಾಡುತ್ತೇವೆ. ಆದರೆ ಪರಿಸ್ಥಿತಿ ಕೈಮೀರಿದ ನಂತರ ಏನು ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ವೈದ್ಯರಿದ್ದಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.

ನನಗೆ ವೆಂಟಿಲೇಟರ್ ಕೊಡುತ್ತೀರಾ ಎಂದು ಮನೆಯಿಂದ ಫೋನ್ ಮಾಡಬೇಡಿ. ಜನತೆಗೆ ಈ ನಿರ್ಲಕ್ಷ್ಯದ ಬುದ್ಧಿ ಹೋಗಬೇಕು. ಬುದ್ಧಿವಂತರ ಜಿಲ್ಲೆಯವರು ಜಾಗರೂಕರಾಗಿ ವರ್ತಿಸಿ ಎಂದು ಉಡುಪಿ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಜನರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮನೆಯಲ್ಲೇ ಕುಳಿತು ನೇರ ಐಸಿಯುಗೆ ಬಂದರೆ ಚಿಕಿತ್ಸೆ ಸಾಧ್ಯವಿಲ್ಲ. ನಿಮ್ಮ ಜೀವದ ಜೊತೆ ನೀವೇ ಆಟವಾಡುತ್ತಿದ್ದೀರಿ ಎಂದು ಸಾಂಕ್ರಾಮಿಕ ಕೊರೊನಾ ನಿರ್ಲಕ್ಷಿಸುವವರ ವಿರುದ್ಧ ಉಡುಪಿ ಡಿಸಿ ಗರಂ ಆಗಿದ್ದಾರೆ.

ಉಡುಪಿಯಲ್ಲಿ 950 ಹೆಚ್ಚು ಆಕ್ಸಿಜನ್ ಬೆಡ್ ಖಾಲಿಯಿದೆ. ಮಹಾಮಾರಿ ಕೊರೊನಾ ಸೋಂಕು ವಿಪರೀತ ಹೆಚ್ಚಳವಾಗುತ್ತಿದ್ದು, ಜ್ವರ ಶೀತ ಕೆಮ್ಮು ನೆಗಡಿಯನ್ನು ಜನ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಜನ ಆಕ್ಸಿಜನ್ ಬೆಡ್ ಇಲ್ಲ ಎಂದು ಪ್ಯಾನಿಕ್ ಆಗದಿರಿ. ಆಸ್ಪತ್ರೆಯ ಅಗತ್ಯ ಇಲ್ಲದವರು ಬೆಡ್ ಹುಡುಕುತ್ತಿದ್ದಾರೆ. ಜನರು ಭಯಪಡಬೇಡಿ, ಜಾಗೃತೆವಹಿಸಿ ಎಂದು ಡಿಸಿ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *