ಕೋವಿಡ್ ನಡುವೆ ಕಂಟಕವಾದ ಅಕಾಲಿಕ ಮಳೆ – ರಾಜ್ಯದ ವಿವಿಧೆಡೆ ಸಿಡಿಲಿಗೆ ಏಳು ಮಂದಿ ಬಲಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಭಾರೀ ಮಳೆಯಾಗಿದೆ. ಮಧ್ಯಾಹ್ನದ ವೇಳೆಗೆ ಚುರು ಚುರು ಎನ್ನುವ ಬಿಸಲಿತ್ತು. ಆದರೆ ಸಂಜೆ ವೇಳೆಗೆ ಗುಡುಗು, ಮಿಂಚು ಸಹಿತ ಧಾರಾಕಾರವಾಗಿ ಮಳೆಯಾಗಿದೆ. ಅನೇಕ ಜಿಲ್ಲೆಗಳಲ್ಲಿ ಮಳೆಯಿಂದ ಸಾಕಷ್ಟು ಮಂದಿ ಸಾವನ್ನಪ್ಪಿದ್ದು ಸಾಕಷ್ಟು ಹಾನಿಯಾಗಿದೆ.

 

ಇಂದು ಸುರಿದ ಮಳೆ ಯಾದಗಿರಿ, ವಿಜಯನಗರ, ದಾವಣಗೆರೆಯಲ್ಲಿ ಹಲವರ ಪ್ರಾಣವನ್ನು ಬಲಿ ಪಡೆದುಕೊಂಡಿದೆ. 7 ಮಂದಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇನ್ನು ಹಲವು ಕಡೆ ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬೆಂಗಳೂರಿನ ಹಲವೆಡೆ ಧಾರಕಾರವಾಗಿ ಮಳೆಯಾಗಿ ರಸ್ತೆಯಲ್ಲಿ ನೀರು ನಿಂತಿದೆ.

 

ಯಾದಗಿರಿಯಲ್ಲಿ ಜಮೀನಿಗೆ ಕೂಲಿ ಕೆಲಸಕ್ಕೆಂದು ತೆರಳಿದ ಸಿದ್ದಮ್ಮ (40) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಸಿಡಿಲು ಹೊಡೆತಕ್ಕೆ ಸಿಲುಕಿ ರಾಜಶೇಖರ (33), ಚಿನ್ನಾಪುರಿ (40), ವೀರಣ್ಣ (50), ಪತ್ರೆಪ್ಪ (43) ಸಾವನ್ನಪ್ಪಿದ್ದಾರೆ. ದಾವಣಗೆರೆಯಲ್ಲಿ ಸಂಜೆಯಿಂದ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ರವಿಕುಮಾರ್(32), ರಮೇಶ್ (30) ಸಿಡಿಲು ಬಡಿದು ಇಬ್ಬರು ಮೃತರಾಗಿದ್ದಾರೆ.

ಇಂದು ಮೋಡ ಕವಿದ ವಾತಾವರಣ ಇತ್ತು. ಸಂಜೆ ಹೊತ್ತಿಗೆ ಗುಡುಗು ಮಿಂಚು ಸಹಿತ ಮಳೆಯಾಗಿದೆ. ನಾಳೆಯೂ ಇದೇ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ತೀರ ಪ್ರದೇಶದ ಪ್ರಭಾವದಿಂದ ಕೇರಳ, ಮಾಹೆ ಮತ್ತು ಕರ್ನಾಟಕದಲ್ಲಿ ಗಾಳಿ ಸಹಿತ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 5 ದಿನಗಳಕಾಲ ಭಾರತದ ದಕ್ಷಿಣ ಪರ್ಯಾಯ ದ್ವೀಪಗಳಲ್ಲಿ ಹಾಗೂ ಮೇ 4 ರಿಂದ 6ವರೆಗೆ ಕೇರಳ ಮತ್ತು ಮಾಹೆ ಪ್ರದೇಶದಲ್ಲಿ ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ. ಮೇ5 ಮತ್ತು6 ಕರಾವಳಿ ಮತ್ತು ದಕ್ಷಿಣ ಒಳ ಕರ್ನಾಟಕ ಪ್ರದೇಶದಲ್ಲಿ ಮಳೆ ಮುಂದುವರೆಯಲಿದೆ ಎಂದು ಭಾರತ ಹವಾಮಾನ ಇಲಾಖೆ ಟ್ವೀಟ್ ಮೂಲಕವಾಗಿ ತಿಳಿಸಿದೆ.

Comments

Leave a Reply

Your email address will not be published. Required fields are marked *