ಕೋವಿಡ್ ಆಸ್ಪತ್ರೆ ಎಡವಟ್ಟು – ಊಟದ ಸ್ಥಳದಲ್ಲೇ ಮೃತದೇಹದ ಆತಂಕ

ರಾಯಚೂರು: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನ ಕೂಡಲೇ ಶವಾಗಾರಕ್ಕೆ ಸಾಗಿಸಬೇಕು. ಆದರೆ ರಾಯಚೂರಿನ ಕೋವಿಡ್ ಆಸ್ಪತ್ರೆಯಲ್ಲಿ ಸುಮಾರು ಗಂಟೆಗಳ ಕಾಲ ಸೋಂಕಿತರ ಪಕ್ಕದಲ್ಲೇ ಶವವನ್ನು ಇಡಲಾಗಿತ್ತು.

ಸೋಂಕಿತರಿಗೆ ಊಟ ನೀಡುವ ಸ್ಥಳದಲ್ಲಿಯೇ ಮೃತದೇಹವನ್ನ ಪ್ಯಾಕ್ ಮಾಡಿ ಇಡಲಾಗಿತ್ತು. ಹೀಗಾಗಿ ಊಟ ತೆಗೆದುಕೊಂಡು ಹೋಗಲು, ಬರುವ ಪ್ರತಿಯೊಬ್ಬರು ಮೃತದೇಹದ ಪಕ್ಕದಲ್ಲೇ ನಿಂತುಕೊಂಡು ಊಟ ತೆಗೆದುಕೊಳ್ಳಬೇಕಾದ ಅವ್ಯವಸ್ಥೆಗೆ ಜನರನ್ನು ಹೈರಾಣಾಗಿಸಿದೆ.

ಸಾಮಾಜಿಕ ಅಂತರ ಕಾಪಾಡಲು ಹೇಳುವ ವೈದ್ಯರೇ ಈ ರೀತಿಯ ಕೆಲಸ ಮಾಡುತ್ತಾರೆ. ರೋಗಿಗಳನ್ನ ನೋಡಲು ಸಹ ಪ್ರತಿದಿನ ಬರುವುದಿಲ್ಲ. ಮೃತದೇಹವನ್ನ ಮಾತ್ರ ಗಂಟೆಗಟ್ಟಲೇ ಆಸ್ಪತ್ರೆಯಲ್ಲಿ ಎಲ್ಲಂದರಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಊಟಕ್ಕಾಗಿ ಕೊರೊನಾ ಸೋಂಕಿತರು ಗ್ರೌಂಡ್ ಫ್ಲೋರ್ ಗೆ ಬರಬೇಕು. ಒಂದೊಂದು ಸಾರಿ ಸಮಯಕ್ಕೆ ಊಟ ಸಿಗುತ್ತೆ. ಮತ್ತೆ ಒಂದೊಂದು ಬಾರಿ ಸರಿಯಾಗಿ ಸಿಗಲ್ಲ. ಕೋವಿಡ್ ವಾರ್ಡಿನ ಗೇಟ್ ಯಾವಾಗಲೂ ತೆರೆದಿರುತ್ತೆ. ರೋಗಿಗಳು, ಸೋಂಕು ಅಲ್ಲದೆ ಇರುವವರು ಸಹ ಹೊರಗೆ ಒಳಗೆ ಓಡಾಡುತ್ತಲೇ ಇರುತ್ತಾರೆ. ಕೊರೊನಾ ಸೋಂಕಿತರು ಬಂದು ಎರಡು ಗಂಟೆಗಳಾದರೂ ದಾಖಲಿಸಿಕೊಳ್ಳದೆ ನಿರ್ಲಕ್ಷ್ಯವಹಿಸುತ್ತದೆ ಎಂದು ಸೋಂಕಿತ ವ್ಯಕ್ತಿ ಹೇಳಿದ್ದಾರೆ.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಜೊತೆಗೆ ಧೈರ್ಯ ತುಂಬಿ ಗುಣಮುಖರನ್ನಾಗಿ ಮಾಡಬೇಕಾದ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಕನಿಷ್ಠ ಸೌಲಭ್ಯ ಒದಗಿಸುವುದರ ಜೊತೆ ಆಸ್ಪತ್ರೆಯ ಪರಿಸ್ಥಿತಿ ಸುಧಾರಿಸಬೇಕಿದೆ ಎಂದು ಸೋಂಕಿತರು ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *