ಕೋಲಾರಕ್ಕೆ ಕಂಟಕವಾಗಿರುವ ಎಪಿಎಂಸಿ ಮ್ಯಾನೇಜರ್- ಭಯಾನಕ ಟ್ರಾವೆಲ್ ಹಿಸ್ಟರಿ

– ನೂರಾರು ಜನರೊಂದಿಗೆ ಸಂಪರ್ಕ

ಕೋಲಾರ: ಏಷ್ಯಾದಲ್ಲೇ ಅತಿದೊಡ್ಡ 2ನೇ ಮಾರುಕಟ್ಟೆ ಎಂಬ ಖ್ಯಾತಿ ಪಡೆದಿರುವ ಕೋಲಾರದ ಎಪಿಎಂಸಿ ಮೇಲೆ ಕಿಲ್ಲರ್ ಕೊರೊನಾ ಕರಿ ನೆರಳು ಬಿದ್ದಿದೆ. ಸಿಎಂಆರ್ ಮಂಡಿಯ ಮ್ಯಾನೇಜರ್ ಗೆ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಕೋಲಾರ ಜಿಲ್ಲೆಗೆ ಕೊರೊನಾಘಾತ ಎದುರಾಗಿದೆ. ಇನ್ನೂ ಭಯಾನಕವೆಂದರೆ ಈತನೊಂದಿಗೆ ನೂರಾರು ಜನ ಸಂಪರ್ಕ ಹೊಂದಿದ್ದಾರೆ.

ಹಾವೇರಿ ಮೂಲದ 46 ವರ್ಷದ ರೋಗಿ ನಂ.2,418 ಟ್ರಾವೆಲ್ ಹಿಸ್ಟರಿ ಕೋಲಾರಕ್ಕೆ ಕಂಟಕ ಎನ್ನುವಂತಾಗಿದೆ. ಮೇ 18- 19ರಂದು ಹಾವೇರಿಯಿಂದ ದಾವಣಗೆರೆ ಮೂಲಕ ಕೋಲಾರಕ್ಕೆ ಬಂದಿರುವ ಸೋಂಕಿತನ ಟ್ರಾವೆಲ್ ಹಿಸ್ಟರಿ ಅಧಿಕಾರಿಗಳ ನಿದ್ದೆಗೆಡಿಸಿದೆ. ಮೇ-21 ರಂದು ಆರೋಗ್ಯದಲ್ಲಿ ಏರುಪೇರಾಗಿದ್ದು, 24ರಂದು ಅನುಮಾನ ಬಂದು ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದಾದ ಬಳಿಕ ಆತನನ್ನು ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದರು. ಆದರೆ ಪಾಸಿಟಿವ್ ಎಂದು ಅಧಿಕೃತವಾಗಿ ಘೋಷಣೆಯಾಗುವವರೆಗೂ ಕೋಲಾರದ ಎಪಿಎಂಸಿಯಲ್ಲಿರುವ ಸಿಎಂಆರ್ ಮಂಡಿಯಲ್ಲಿ ಹಣದ ವ್ಯವಹಾರ ಮಾಡಿದ್ದಾನೆ.

ನೂರಾರು ರೈತರನ್ನು ಮಾತನಾಡಿಸಿರುವುದಲ್ಲದೆ, ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸಿದ್ದಾನೆ. ಹೀಗಾಗಿ ಈತನ ಟ್ರಾವೆಲ್ ಈಸ್ಟರಿ ಭಯಾನಕವಾಗಿದ್ದು, ನೂರಾರು ಜನರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದಾನೆ. ಜಿಲ್ಲಾಡಳಿತಕ್ಕೆ ಇದು ತಲೆನೋವಾಗಿ ಪರಿಣಮಿಸಿದೆ.

ರೋಗಿಯನ್ನು ಕೋವಿಡ್-19 ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇದೀಗ ಕೋಲಾರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 19ಕ್ಕೆ ಏರಿದೆ. ಸೋಂಕಿತ ವಸವಿದ್ದ ನಗರದ ಹಾರೋಹಳ್ಳಿ ಬಡಾವಣೆ ಹಾಗೂ ಸಿಎಂಆರ್ ಮಂಡಿಯನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದ್ದು, ಸೋಂಕಿತನ ಸಂಪರ್ಕದಲ್ಲಿದ್ದ 35 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮತ್ತಷ್ಟು ಜನರಿಗಾಗಿ ಹುಡುಕಾಟ ನಡೆದಿದೆ.

Comments

Leave a Reply

Your email address will not be published. Required fields are marked *