ಕೋಣ ಓಡಿಸುತ್ತಿರೋವಾಗ್ಲೇ ಕುಸಿದು ಬಿದ್ದ ಕಂಬಳದ ಉಸೇನ್ ಬೋಲ್ಟ್

ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶ್ರೀನಿವಾಸ ಗೌಡ ಈ ಬಾರಿಯ ಮೊದಲ ಕಂಬಳದಲ್ಲೇ ಕುಸಿದು ಬಿದ್ದು ಗಾಯಗೊಂಡಿದ್ದಾರೆ.

ಕಳೆದ ವರ್ಷ ಇದೇ ದಿನ ಅಂದರೆ 2020ರ ಫೆಬ್ರವರಿ 1 ರಂದು ನಡೆದ ಐಕಳ ಕಂಬಳದಲ್ಲಿ 100 ಮೀಟರ್ ಕಂಬಳಗದ್ದೆಯ ದೂರವನ್ನು ಕೇವಲ 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದರು. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದ ಮಿಜಾರು ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ಗಿಂತಲೂ ವೇಗಿ ಎಂದು ಗುರುತಿಸಲ್ಪಟ್ಟಿದ್ದರು. ಆದರೆ ಈ ಬಾರಿ ಆರಂಭಗೊಂಡ ಮೊದಲ ಕಂಬಳವಾದ ಹೊಕ್ಕಾಡಿಗೋಳಿ ಕಂಬಳದ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ನೇಗಿಲು, ಹಿರಿಯ ವಿಭಾಗದ ಕೋಣಗಳನ್ನು ಓಡಿಸುತ್ತಿರುವಾಗ ಕರೆಯ ಮಧ್ಯಭಾಗಕ್ಕೆ ಶ್ರೀನಿವಾಸ ಗೌಡ ಡಿಕ್ಕಿ ಹೊಡೆದು ಅಲ್ಲೇ ಕುಸಿದು ಬಿದ್ದಿದ್ದರು.

ಕೈ ಹಾಗೂ ಎದೆಯ ಭಾಗಕ್ಕೆ ಸ್ವಲ್ಪ ಪ್ರಮಾಣದ ಗಾಯಗಳಾಗಿದ್ದು ಬಳಿಕ ಯಾವುದೇ ಓಟದಲ್ಲಿ ಅವರು ಭಾಗಿಯಾಗಿಲ್ಲ. ಸಣ್ಣಪುಟ್ಟ ಗಾಯಗಳಾಗಿರೋದ್ರಿಂದ ಫೆ.6 ರಂದು ನಡೆಯುವ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡ ಕೋಣಗಳನ್ನು ಓಡಿಸಲಿದ್ದಾರೆ ಎಂದು ಅವರ ಆಪ್ತರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಕಳೆದ 2020ರ ಸೀಸನ್ ನಲ್ಲಿ 11 ಕಂಬಳದಲ್ಲಿ ಕೋಣ ಓಡಿಸಿದ ಶ್ರೀನಿವಾಸ ಗೌಡ ಬರೋಬ್ಬರಿ 32 ಪದಕ ಗಳಿಸಿ ಕಂಬಳದ ಇತಿಹಾಸದಲ್ಲೇ ಹೊಸ ದಾಖಲೆ ಮಾಡಿದ್ದರು.

Comments

Leave a Reply

Your email address will not be published. Required fields are marked *