ಕೊರೊನಾ 2ನೇ ಅಲೆ, ಕೋಚಿಂಗ್ ಸೆಂಟರ್ ಬಂದ್ – ವಿದ್ಯಾರ್ಥಿಗಳಿಂದ ಗಲಾಟೆ

– ಕಲ್ಲು ತೂರಾಟ, ಸಾರ್ವಜನಿಕ ಆಸ್ತಿಗೆ ಹಾನಿ
– ಗಲಾಟೆಯಲ್ಲಿ ಪೊಲೀಸರು, ಪತ್ರಕರ್ತರಿಗೆ ಗಾಯ

ಪಾಟ್ನಾ: ಕೊರೊನಾ ನಿಯಂತ್ರಣಕ್ಕಾಗಿ ಹೆಚ್ಚು ಜನರು ಒಂದೆಡೆ ಸೇರುವ ಸ್ಥಳಗಳಿಗೆ ಸರ್ಕಾರ ನಿರ್ಬಂಧ ಹಾಕುತ್ತಿದೆ. ಬಿಹಾರದ ಸಾಸಾರಾಮ ನಗರದಲ್ಲಿ ಕೋಚಿಂಗ್ ಸೆಂಟರ್ ಬಂದ್ ಖಂಡಿಸಿ ವಿದ್ಯಾರ್ಥಿಗಳು ಗಲಾಟೆ ನಡೆಸಿದ್ದಾರೆ. ಸದ್ಯ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 9 ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದು, ಪರಿಸ್ಥಿತಿಯನ್ನ ತಿಳಿಗೊಳಿಸಿದ್ದಾರೆ.

ಇಂದು ಬೆಳಗ್ಗೆ ಸಾಸಾರಾಮ ನಗರದ ಪೋಸ್ಟ್ ಆಫಿಸ್ ಚೌಕ ಮತ್ತು ಗೌರಕ್ಷಣಿ ಬಜಾರ್ ನಲ್ಲಿ ಅಪಾರ ಪ್ರಮಾಣದ ವಿದ್ಯಾರ್ಥಿಗಳು ಒಂದೆಡೆ ಸೇರಿ ಪ್ರತಿಭಟನೆಗೆ ಮುಂದಾದರು. ಜಿಲ್ಲಾಧಿಕಾರಿಗಳ ಆವರಣ ಪ್ರವೇಶಿಸಿದ ವಿದ್ಯಾರ್ಥಿಗಳು ಪ್ರಯಾಣಿಕರಿಗಾಗಿ ಹಾಕಲಾಗಿದ್ದ ಬೆಂಚುಗಳಿಗೆ ಬೆಂಕಿ ಹಾಕಿದ್ದಾರೆ. ಇನ್ನು ಕೆಲವರು ಆವರಣದಲ್ಲಿದ್ದ ವಸ್ತುಗಳನ್ನ ಧ್ವಂಸಗೊಳಿಸಿ ಜಿಲ್ಲಾಧಿಕಾರಿಗಳ ಆದೇಶದ ವಿರುದ್ಧ ದಿಕ್ಕಾರ ಕೂಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದಾಗಲೂ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿಯಲು ಒಪ್ಪಿಲ್ಲ. ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಘಟನೆಯಲ್ಲಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ನಾರಾಯಣ್ ಸಿಂಗ್ ಸೇರಿದಂತೆ ಮೂವರು ಪೊಲೀಸರು ಗಾಯಗೊಂಡಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಅಶ್ರವಾಯು ಪ್ರಯೋಗಿಸಿ ಎಲ್ಲರನ್ನ ಚದುರಿಸಿದ್ದಾರೆ. ಪ್ರತಿಭಟನೆಯ ನೇತೃತ್ವವಹಿಸಿದ್ದ 9 ವಿದ್ಯಾರ್ಥಿಗಳು ಸೇರಿದಂತೆ 12ಕ್ಕೂ ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವರು ಕಲ್ಲು ತೂರಾಟ ನಡೆಸಿದ್ದರಿಂದ ಪತ್ರಕರ್ತರು ಸಹ ಗಾಯಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *