ಕೊರೊನಾ ಹೊಸ ರೂಪಾಂತರ – ಇಂಗ್ಲೆಂಡಿನಲ್ಲಿ ಲಾಕ್‌ಡೌನ್‌ ಜಾರಿ

– ಲಂಡನ್‌ನಲ್ಲಿ ಕಠಿಣ ಲಾಕ್‌ಡೌನ್‌ ಜಾರಿ
– ವಿಮಾನ ಸೇವೆಯನ್ನು ಕಡಿತಗೊಳಿಸಿದ ದೇಶಗಳು

ಲಂಡನ್‌: ಕೊರೊನಾ ವೈರಸ್‌ ಹೊಸ ರೂಪಾಂತರದಿಂದ ಇಂಗ್ಲೆಂಡ್‌ ತತ್ತರಿಸಿದ್ದು ಜನರು ಬೆಚ್ಚಿ ಬಿದ್ದಿದ್ದಾರೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಂಡನ್‌ ಮತ್ತು ಆಗ್ನೇಯ ಇಂಗ್ಲೆಂಡ್‌ನಲ್ಲಿ ಕಠಿಣ ಲಾಕ್‌ಡೌನ್‌ ಜಾರಿಯಾಗಿದೆ.

ಇತ್ತೀಚೆಗೆ ಫೈಝರ್‌ ಲಸಿಕೆ ಬಳಕೆ ಅನುಮತಿ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್‌ ಪಾತ್ರವಾಗಿತ್ತು. ಆದರೆ ಈಗ ಏಕಾಏಕಿ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದ್ದು ಸರ್ಕಾರಕ್ಕೆ ನಿಯಂತ್ರಣ ಕಷ್ಟವಾದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಿ ಆದೇಶ ಹೊರಡಿಸಿದೆ.

ಕ್ಯಾಬಿನೆಟ್‌ ಸಭೆ ನಡೆಸಿದ ಬಳಿಕ ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸಸ್‌ ಲಾಕ್‌ಡೌನ್‌ ನಿರ್ಧಾರವನ್ನು ಪ್ರಕಟಿಸಿದರು. ಈ ಹೊಸ ವೈರಸ್‌ ಹಿಂದಿನ ವೈರಸ್ಸಿಗಿಂತ ಶೇ.70ರಷ್ಟು ಪಟ್ಟು ವೇಗವಾಗಿ ಹರಡುತ್ತಿರುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.

ಇಂಗ್ಲೆಂಡ್‌ ರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಪ್ರತಿಕ್ರಿಯಿಸಿ, ಹೊಸ ರೂಪಾಂತರ ಸಂಪೂರ್ಣವಾಗಿ ನಿಯಂತ್ರಣ ತಪ್ಪಿದೆ. ಲಸಿಕೆ ಬರುವವರೆಗೆ ಮುಂದಿನ ದಿನಗಳು ಬಹಳ ಕಠಿಣವಾಗಿರಲಿದೆ ಎಂದು ಹೇಳಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾದಂತೆ ತಿಂಗಳ ಕಾಲ ಲಾಕ್‌ಡೌನ್‌ ಇರುವ ಸಾಧ್ಯತೆಯಿದೆ

ಲಾಕ್‌ಡೌನ್‌ ಘೋಷಣೆಯಾದ ಬೆನ್ನಲ್ಲೇ ಬಹುತೇಕ ಯುರೋಪ್‌ ರಾಷ್ಟ್ರಗಳು ಇಂಗ್ಲೆಂಡ್‌ ಜೊತೆಗಿನ ವಿಮಾನ ಸೇವೆಯನ್ನು ರದ್ದುಗೊಳಿಸಿವೆ. ಇಸ್ರೇಲ್, ಸೌದಿ ಅರೇಬಿಯಾ ಹಾಗೂ ಟರ್ಕಿ ಕೂಡ ಇಂಗ್ಲೆಂಡ್‌ಗೆ ತಾತ್ಕಾಲಿಕವಾಗಿ ತಮ್ಮ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ರದ್ದುಗೊಳಿಸಿವೆ.

ಡಿಸೆಂಬರ್‌ 31ರವರೆಗೆ ಭಾರತ ಸಹ ತಾತ್ಕಾಲಿಕವಾಗಿ ಇಂಗ್ಲೆಂಡ್‌ ಜೊತೆಗಿನ ವಿಮಾನ ಸಂಪರ್ಕವನ್ನು ರದ್ದುಗೊಳಿಸಿದೆ.

Comments

Leave a Reply

Your email address will not be published. Required fields are marked *