ಶಕ್ತಿ ವರ್ಧಕ ಕಿಟ್, ಸ್ಯಾನಿಟೈಸರ್ ಪ್ರತಿ ಮನೆಗೂ ಸರ್ಕಾರ ಒದಗಿಸಲಿ- ಎಚ್‍ಡಿಕೆ ಸಲಹೆ

ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಹಲವು ಸಲಹೆ ಕೊಟ್ಟಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಮೊದಲಿಗೆ “ಕೊರೊನಾ ವ್ಯಾಪಕ ಹೆಚ್ಚಳ ಹಿನ್ನೆಲೆಯಲ್ಲಿ ವಿಟಮಿನ್ ಸಿ ಔಷಧಿ ಹಾಗೂ ಆಯುಷ್ ಸಚಿವಾಲಯ ದೃಢೀಕರಿಸಿದ ರೋಗ ನಿರೋಧಕ ಶಕ್ತಿ ವರ್ಧಕ ಕಿಟ್ (Immunity Booster) ಮತ್ತು ಸ್ಯಾನಿಟೈಸರ್ ಪ್ರತಿ ಮನೆ ಮನೆಗೂ ಸರ್ಕಾರ ಒದಗಿಸಲಿ” ಎಂದು ಸಲಹೆ ನೀಡಿದ್ದಾರೆ.

ಈ ಆರೋಗ್ಯ ಕಿಟ್‍ಗಳು ಪ್ರತಿ ಮೆಡಿಕಲ್ ಹಾಗೂ ಇತರ ಅಂಗಡಿಗಳಲ್ಲಿ ಮಾರಾಟಕ್ಕೂ ದೊರೆಯಲಿ. ಇದಲ್ಲದೆ ರೋಗ ಲಕ್ಷಣ ಕಂಡು ಬಂದವರಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಔಷಧಿಗಳನ್ನು ಪೂರೈಸಬೇಕು. ಆಗ ಮಾತ್ರ ಕರ್ನಾಟಕ ಕೊರೊನಾ ನಿಯಂತ್ರಣ ಮಾಡಲು ಸಾಧ್ಯ ಎಂದರು.

“ಎಲ್ಲರಿಗೂ ಆರೋಗ್ಯ ಕಿಟ್ ನೀಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಆರೋಗ್ಯ ಕಿಟ್ ನೀಡಲು ಸರ್ಕಾರ ತಕ್ಷಣವೇ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಸೂಚಿಸಿದರು.

ಇದರ ಜೊತೆಗೆ ಕೇಂದ್ರ ಸರ್ಕಾರ ಈ ಸೋಂಕು ತಡೆಗೆ ಬಳಸಬಹುದಾದ ಯೋಗ್ಯ ಔಷಧಿಗಳ (upplement) ಪಟ್ಟಿ ಒದಗಿಸಬೇಕು. ಅದನ್ನು ಸಾರ್ವಜನಿಕರು ವ್ಯಾಪಕವಾಗಿ ಬಳಸುವಂತೆ ಸಾಮೂಹಿಕ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ.

“ಸರ್ಕಾರ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೊರೊನಾ ವೈರಸ್ ತಡೆಯುವಲ್ಲಿ ಎಡವುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇನ್ನಾದರೂ ಜವಾಬ್ದಾರಿಯಿಂದ, ದೂರದೃಷ್ಟಿಯಿಂದ ಸರ್ಕಾರ ಕಾರ್ಯ ಸಾಧುವಾದ ಯೋಜನೆಗಳನ್ನು ಜಾರಿಗೊಳಿಸಲು ತಕ್ಷಣ ಕಾರ್ಯೋನ್ಮುಖರಾಗುವಂತೆ ಆಗ್ರಹಿಸುತ್ತೇನೆ” ಎಂದು ಟ್ವಿಟ್ಟರಿನಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *