ಕೊರೊನಾ ಸೋಂಕು ಉಲ್ಬಣ- ಆಸ್ಪತ್ರೆಗಳ ಮಾಹಿತಿಗಾಗಿ ಸರ್ಕಾರದಿಂದ ಮೊಬೈಲ್ ಆ್ಯಪ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿದ್ದು 20 ಸಾವಿರ ಗಡಿಯನ್ನು ದಾಟಿದೆ. ಈ ನಡುವೆ ಕೊರೊನಾ ಸೋಂಕಿತ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಹೊಸ ಮೊಬೈಲ್ ಆ್ಯಪ್ ಒಂದನ್ನ ಪರಿಚಯಿಸಿದೆ.

ಇಂದು ಸುದ್ದಿಗೋಷ್ಟಿ ನಡೆಸಿದ ಸಿಎಂ ಅರವಿಂದ್ ಕೇಜ್ರಿವಾಲ್ ಆ್ಯಪ್ ಬಿಡುಗಡೆ ಮಾಡಿದರು. ಆ್ಯಪ್‍ನಲ್ಲಿ ದೆಹಲಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ಇರಲಿದ್ದು ಖಾಲಿ ಹಾಸಿಗೆಗಳು, ಐಸಿಯು, ವೆಂಟಿಲೇಟರ್ ಬೆಡ್ ಗಳ ಮಾಹಿತಿ ಒಳಗೊಂಡಿರಲಿದೆ.

ಸಾರ್ವಜನಿಕರು ಮತ್ತು ಆಸ್ಪತ್ರೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಆ್ಯಪ್ ಪರಿಚಯಿಸಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಆ್ಯಪ್ ನಲ್ಲಿ ಕೊರೊನಾ ಆಸ್ಪತ್ರೆ ಮತ್ತು ಖಾಲಿ ಹಾಸಿಗೆ ಮಾಹಿತಿ ಇರಲಿದ್ದು ಕೊರೊನಾ ಸೋಂಕಿನ ಗುಣಲಕ್ಷಣಗಳು ಇದ್ದಲ್ಲಿ ಆ್ಯಪ್ ನಲ್ಲಿನ ಮಾಹಿತಿ ಆಧರಿಸಿ ಸಮೀಪದ ಆಸ್ಪತ್ರೆಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆಗೆ ನಿರಾಕರಿಸಿದರೆ ದೆಹಲಿ ಸರ್ಕಾರದ ಆರೋಗ್ಯ ಕಾರ್ಯದರ್ಶಿ ಹೆಲ್ಪಲೈನ್ ನಂಬರ್ 1031 ಗೆ ದೂರು ನೀಡಿ ಕೂಡಲೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಆಂಡ್ರಾಯ್ಡ್ ಮೊಬೈಲ್ ಬಳಕೆ ಮಾಡಿದಿದ್ದಲ್ಲಿ  delhifightscorona.in  ಗೆ ಲಾಗ್ ಇನ್ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ. ಸೂಕ್ತ ಮಾಹಿತಿಯನ್ನು ಮೆಸೇಜ್ ಮೂಲಕ ತಲುಪಿಸುವ ಕೆಲಸವೂ ಕೂಡ ಸರ್ಕಾರ ಮಾಡಲಿದೆ ಎಂದು ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

ಸಣ್ಣ ಪ್ರಮಾಣದ ಲಕ್ಷಣಗಳು, 0 ಮಾದರಿಯ ಗುಣಲಕ್ಷಣಗಳು ಇದ್ದಲ್ಲಿ ಎಲ್ಲರೂ ಆಸ್ಪತ್ರೆ ದಾಖಲಾಗುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದರೆ ಸಾಕು ಸರ್ಕಾರದ ಅಧಿಕಾರಿಗಳು ಪ್ರತಿನಿತ್ಯ ಎರಡು ಬಾರಿ ನಿಮ್ಮ ಮಾಹಿತಿ ಪಡೆದುಕೊಳ್ಳಲಿದ್ದು ಪರಿಸ್ಥಿತಿ ಗಂಭೀರವಾಗಿದ್ದರೆ ಆಸ್ಪತ್ರೆ ಶಿಫ್ಟ್ ಮಾಡಲಾಗುವುದು ಎಂದು ಕೇಜ್ರಿವಾಲ್ ಜನರಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *