ಕೊರೊನಾ ಸಮಯದಲ್ಲಿ ಭಾರತದ ರಸಂಗೆ ಮನಸೋತ ಅಮೆರಿಕ ಜನತೆ

– ವೈರಲ್ ಆಯ್ತ ಸಿಂಪಲ್ ಅಡುಗೆ
– ದಕ್ಷಿಣ ಭಾರತದ ರಸಂಗೆ ಭಾರೀ ಬೇಡಿಕೆ

ವಾಷಿಂಗ್ಟನ್: ವಿಶ್ವವೇ ಕೊರೊನಾ ಲಸಿಕೆ ಯಾವಾಗ ಸಿಗುತ್ತೆ ಎಂದು ಕಾದುಕೊಂಡಿದ್ದರೆ, ಇತ್ತ ಅಮೆರಿಕನ್ನರು ದಕ್ಷಿಣ ಭಾರತದ ಅಡುಗೆ ರಸಂಗೆ ಮನ ಸೋತಿದ್ದಾರೆ.

ಹೌದು. ಭಾರತದ ರಸಂಗೆ ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ದಿಢೀರ್ ಬೇಡಿಕೆ ಉಂಟಾಗಿದೆ. ರಸಂನಿಂದ ರೋಗ ಇಮ್ಯೂನಿಟಿ ಪವರ್(ರೋಗ ನಿರೋಧಕ ಶಕ್ತಿ) ಹೆಚ್ಚಾಗುತ್ತದೆ ಎಂದು ತಿಳಿದು ಅಮೆರಿಕನ್ನರು ಈಗ ಮನೆಗೆ ರಸಂ ಪ್ಯಾಕೆಟ್‍ಗಳನ್ನು ತರಿಸಿಕೊಳ್ಳುತ್ತಿದ್ದಾರೆ.

ಅಮೆರಿಕನ್ನರು ಈ ರೀತಿ ಮನಸೋಲಲು ಕಾರಣ ಬಾಣಸಿಗ ಅರುಣ್ ರಾಜದುರೈ ಅವರು ತಯಾರಿಸಿದ ರಸಂ. ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕುಳಿತಿದ್ದಾಗ ತಮಿಳುನಾಡು ಮೂಲದ ಬಾಣಸಿಗ 35 ವರ್ಷದ ಅರುಣ್ ರಾಜದುರೈ ಅವರಿಗೆ ಒಂದು ವಿಭಿನ್ನವಾದ ಯೋಚನೆ ಬರುತ್ತದೆ.

ಅರಿಶಿಣ, ಬೆಳ್ಳುಳ್ಳಿ, ಶುಂಠಿ ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇದೆ ಎಂದು ತಿಳಿದಿದ್ದ ಅರುಣ್ ಯಾಕೆ ರಸಂ ಮಾಡಿ ಕೊರೊನಾ ರೋಗಿಗಳಿಗೆ ನೀಡಬಾರದು ಎಂಬ ಅಲೋಚನೆ ಬಂದಿದೆ.

ಆಲೋಚನೆ ಸಾಕಾರಗೊಳಿಸಲು ಶೆಫ್ ಅರುಣ್ ಕೊರೊನಾ ರೋಗಿಗಳಿರುವ ಮೂರು ಆಸ್ಪತ್ರೆಗಳಿಗೆ ಊಟವನ್ನು ನೀಡುತ್ತಿದ್ದರು. ಆಗ ರಸಂ ಅನ್ನು ಜನ ಕಾಂಪ್ಲಿಮೆಂಟರಿ ಡಿಶ್ ಆಗಿ ಸೇರಿಸಿಕೊಂಡರು. ಅರುಣ್ ತಯಾರಿಸಿದ ರಸಂ ರುಚಿ ನೋಡಿದ ರೋಗಿಗಳು ಉತ್ತಮ ಪ್ರತಿಕ್ರಿಯೆಯನ್ನು ನೀಡಿದ್ದು ಮಾತ್ರವಲ್ಲದೆ ದಿನದಿಂದ ದಿನಕ್ಕೆ ರಸಂ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತದೆ.

ಗುಣಮುಖರಾದ ಕೊರೊನಾ ಸೋಂಕಿತರು ರಸಂ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದರಿಂದಾಗಿ ಇಮ್ಯೂನಿಟಿ ಹೆಚ್ಚಾಗಿದೆ ಎಂದು ಅಭಿಪ್ರಾಯ ಹಂಚಿ ಧನ್ಯವಾದ ತಿಳಿಸಿದ್ದರು. ಬಾಯಿಂದ ಬಾಯಿ ನಂತರ ಸಾಮಾಜಿಕ ಜಾಲತಾಣಗಳನ್ನು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಚಾರ ಸಿಕ್ಕಿದ್ದೆ ತಡ ರಸಂಗೆ ದಿಢೀರ್ ಬೇಡಿಕೆ ಬರಲು ಆರಂಭವಾಯಿತು.

ನ್ಯೂಯಾರ್ಕ್, ನ್ಯೂಜೆರ್ಸಿ, ಕೆನಡಾಗಳಲ್ಲಿ ರಸಂ ಸಿಕ್ಕಾ ಪಟ್ಟೆ ಫೇಮಸ್ ಆಯ್ತು. ಇದೀಗ ದಿನಕ್ಕೆ 500 ರಿಂದ 600 ಕಪ್ ರಸಂ ಮಾರಾಟವಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅರುಣ್, ನಾನು ಮನೆಯಲ್ಲಿ ಇದ್ದಾಗ ಪ್ರಯೋಗ ಮಾಡಿದೆ. ಕೊರೊನಾ ರೋಗಿಗಳಿಗೆ ರಸಂ ಕೊಡುವ ಯೋಚನೆ ಮಾಡಿದೆ. ಅಡುಗೆಯಲ್ಲಿ ಈ ಡಿಶ್ ಸೇರಿಸಿಕೊಂಡೆ. ಆದರೆ ಇಷ್ಟೊಂದು ಉತ್ತಮ ಸ್ಪಂದನೆ ಸಿಗುತ್ತದೆ ಎಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.ಇದನ್ನು ಓದಿ: ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

ಅರುಣ್ ಅರಿಯಾಲೂರಿನ ಜಯನ್‍ಕೊಂಡಂನ ಮೀನ್‍ಸುರುಟ್ಟಿ ಮೂಲದವರಾಗಿದ್ದಾರೆ. 5 ವರ್ಷ ಹಿಂದೆ ನ್ಯೂಜೆರ್ಸಿಗೆ ಬಂದಿದ್ದರು. 2018ರ ಬೆಸ್ಟ್ ಸೌತ್ ಈಸ್ಟ್ ಏಷ್ಯನ್ ಶೆಫ್ ಅವಾರ್ಡ್ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *