ಕೊರೊನಾ ಸಮಯದಲ್ಲಿ ಕೆಲಸ ಮಾಡಲು ಮಗಳ ಮದುವೆಯನ್ನೇ ಮುಂದೂಡಿದ ಪೊಲೀಸ್

– ಕೋವಿಡ್‍ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸಹಾಯ

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಣದಲ್ಲಿ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳು ಹಾಗೂ ಸ್ಮಶಾಣಗಳು ಭರ್ತಿಯಾಗಿವೆ. ಜನ ಒಂದೆಡೆ ಬೆಡ್‍ಗಾಗಿ ಪರದಾಡುತ್ತಿದ್ದರೆ, ಇನ್ನೂ ಹಲವರು ಸ್ಮಶಾಣಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಅಸಿಸ್ಟೆಂಟ್ ಸಬ್ ಇನ್‍ಸ್ಪೆಕ್ಟರ್ ತಮ್ಮ ಮಗಳ ವಿವಾಹವನ್ನೇ ರದ್ದುಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಈ ಹಿನ್ನೆಲೆ ಅಸಿಸ್ಟೆಂಟ್ ಸಬ್ ಇನ್‍ಸ್ಪೆಕ್ಟರ್ ರಾಕೇಶ್ ಕುಮಾರ್ (56) ತಮ್ಮ ಮಗಳ ಮದುವೆಯನ್ನು ಮುಂದೂಡಿದ್ದಾರೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ ಸಹಾಯ ಮಾಡಲೆಂದು ವಿವಾಹವನ್ನು ಮುಂದೂಡಿದ್ದಾರೆ.

ಎಎಸ್‍ಐ ರಾಕೇಶ್ ಕುಮಾರ್ ಅವರು ಲೋಧಿ ರಸ್ತೆಯ ಶವಾಗಾರದ ಬಳಿ ಕೆಲಸ ಮಾಡುತ್ತಿದ್ದು, ಕೊರೊನಾ ಮಧ್ಯೆ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಹಯ ಮಾಡಿದ್ದಾರೆ. ಸುಮಾರು 1,100 ಜನರಿಗೆ ಸಹಾಯ ಮಾಡಿದ್ದೇನೆ. ನಾನು ಎರಡೂ ಡೋಸ್ ಲಸಿಕೆ ಪಡೆದಿದ್ದು, ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನೂ ವಹಿಸಿದ್ದೇನೆ. ಇತರರಿಗೆ ನಾವು ಸಹಾಯ ಮಾಡಿದರೆ ನಮಗೆ ದೇವರು ಸಹಾಯ ಮಾಡುತ್ತಾನೆ. ಇಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ನನ್ನ ಮಗಳ ವಿವಾಹವನ್ನೇ ಮುಂದೂಡಿದ್ದೇನೆ ಎಂದು ತಿಳಿಸಿದ್ದಾರೆ.

ಸಾವನ್ನಪ್ಪಿದವರ ಕುಟುಂಬಸ್ಥರಿಗೆ ಹಾಗೂ ಶವಾಗಾರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಹಾಯ ಮಾಡುತ್ತೇನೆ. ಬೆಳಗ್ಗೆ 7 ಗಂಟೆಗೆ ಕೆಲಸಕ್ಕೆ ಹಾಜರಾಗಿ, ರಾತ್ರಿ 7-8ರ ವರೆಗೆ ಕೆಲಸ ಮಾಡುತ್ತೇನೆ. ಕೊರೊನಾ ಸೋಂಕಿತರ ಮೃತದೇಹ ಹೊತ್ತೊಯ್ಯುವುದು, ಪೂಜೆ ಸಾಮಗ್ರಿ ಕೊಳ್ಳುವುದು ಹಾಗೂ ಅಂಬುಲೆನ್ಸ್ ಚಾಲಕರಿಗೆ ಸಹಾಯ ಮಾಡುವ ಕೆಲಸವನ್ನು ಸಹ ಮಾಡುವುದಾಗಿ ತಿಳಿಸಿದ್ದಾರೆ.

ರಾಕೇಶ್ ಕುಮಾರ್ ಅವರು ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಲು ಸಹಾಯ ಮಾಡುತ್ತೇನೆ. ಮೇ 7ರಂದು ನಡೆಯಬೇಕಿದ್ದ ಮಗಳ ವಿವಾಹವನ್ನು ಸಹ ಮುಂದೂಡಿದ್ದೇನೆ ಎಂದು ತಿಳಿಸಿದ್ದಾರೆ. ಇವರ ಪತ್ನಿ ಹಾಗೂ ಮೂವರು ಬಾಘ್‍ಪತ್‍ನಲ್ಲಿ ವಾಸವಿದ್ದಾರೆ. ಪ್ರತಿ 15 ದಿನಗಳಿಗೊಮ್ಮೆ ಮನೆಗೆ ಹೋಗಿ ಬರುತ್ತಾರೆ. ಸಾಕಷ್ಟು ಜನರಿಗೆ ನಾನು ಸಹಾಯ ಮಾಡುವ ಅಗತ್ಯವಿದೆ. ಹೀಗಿರುವಾಗ ನಾನು ಹೇಗೆ ನನ್ನ ಮಗಳ ವಿವಾಹವನ್ನು ಸಂಭ್ರಮದಿಂದ ಮಾಡಲಿ ಎಂದು ಪ್ರಶ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *