ಕೊರೊನಾ ಸದೆಬಡಿಯಲು ಸುತ್ತ ನಾಲ್ಕು ಜಿಲ್ಲೆಯ ಜೊತೆ ಉಡುಪಿ ಸಂಪರ್ಕ ಕಟ್

– 14 ದಿನದ ಸೀಲ್‍ಡೌನ್ ಪ್ಲಾನ್

ಉಡುಪಿ: ಕರ್ನಾಟಕದಲ್ಲಿ ಕೊರೊನಾ ಕಂಟ್ರೋಲ್ ಮಾಡುವುದಕ್ಕೆ ಸರ್ಕಾರ ಸರ್ಕಸ್ ಮಾಡುತ್ತಿದೆ. ಏನೇ ಪ್ಲಾನ್ ಮಾಡಿದರೂ ಕೂಡ ರಾಜ್ಯದಲ್ಲಿ ಕೊರೊನಾ ಹಬ್ಬುತ್ತಲೇ ಇದೆ. ರಾಜ್ಯದ ಕೆಲ ಜಿಲ್ಲೆಗಳು ಲಾಕ್‍ಡೌನ್, ಹಾಫ್ ಲಾಕ್‍ಡೌನ್ ಆಗಿರಬೇಕಾದರೆ ಉಡುಪಿ ಜಿಲ್ಲೆಯನ್ನು 14 ದಿನ ಸೀಲ್ ಮಾಡಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,800 ಗಡಿಗೆ ಬಂದು ನಿಂತಿದೆ. ಸಮುದಾಯಕ್ಕೂ ಕೊರೊನಾ ಹಬ್ಬಲು ಆರಂಭಿಸಿದೆ. ಜಿಲ್ಲೆಯಲ್ಲಿ ಕೊರೊನಾ ಕಂಟ್ರೋಲ್ ತಪ್ಪುವ ಮೊದಲು ಅದನ್ನು ಹತೋಟಿಗೆ ತರಲು ಜಿಲ್ಲಾಡಳಿತ, ಜಿಲ್ಲಾ ತಜ್ಞ ವೈದ್ಯರು ಒಂದು ಪ್ಲಾನ್ ಮಾಡಿದ್ದಾರೆ. ಉಡುಪಿ ಜಿಲ್ಲೆಯ ತಜ್ಞ ವೈದ್ಯರ ಸಲಹೆಯಂತೆ ಜಿಲ್ಲೆಯನ್ನು 14 ದಿನ ಸೀಲ್ ಮಾಡಲಾಗಿದೆ. ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಯನ್ನು ಅರ್ಧ ತಿಂಗಳು ಬೇರ್ಪಡಿಸಲಾಗಿದೆ.

ಇವತ್ತು ಬೆಳಗ್ಗಿನಿಂದಲೇ ಸುತ್ತ ನಾಲ್ಕು ಜಿಲ್ಲೆಯಿಂದ ಬರುವ ಎಲ್ಲ ವಾಹನಗಳನ್ನು ಅಡ್ಡಗಟ್ಟಿ ವಾಪಸ್ ಕಳುಹಿಸಲಾಗುತ್ತಿದೆ. ಪೊಲೀಸರು ಹತ್ತಕ್ಕಿಂತಲೂ ಹೆಚ್ಚು ಗಡಿ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಸಿಬ್ಬಂದಿ ನೇಮಿಸಿದ್ದಾರೆ. ಮೂರು ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರತರಾಗಿದ್ದಾರೆ. ತುರ್ತು ಅಗತ್ಯ ಹೊರತುಪಡಿಸಿ ಯಾವುದೇ ವಾಹನಗಳನ್ನು ಉಡುಪಿ ಜಿಲ್ಲೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ ಎಂದು ಎಸ್‍ಪಿ. ವಿಷ್ಣುವರ್ಧನ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಉಡುಪಿ ಜಿಲ್ಲಾಡಳಿತ ಸರಕು ಸಾಮಗ್ರಿ, ಅಗತ್ಯ ವಸ್ತು ಹಣ್ಣು ತರಕಾರಿ ಹಾಲು ದಿನಸಿ ಮುಂತಾದ ವಾಹನಗಳಿಗೆ ಮಾತ್ರ ವಿನಾಯಿತಿ ಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಮೂವತ್ತುಕ್ಕಿಂತಲೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಇರುವ ಕಾರಣ ಸುತ್ತಮುತ್ತಲ ಜಿಲ್ಲೆಗಳಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅವರಿಗೆ ವಿನಾಯಿತಿಯನ್ನು ಕೊಡಲಾಗಿದೆ. ಜಿಲ್ಲೆಯ ಒಳಗೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟ ನಿರ್ಬಂಧಿಸಲಾಗಿದೆ. ಜಿಲ್ಲೆಯ ಗಡಿಯನ್ನು ಸೀಲ್ ಮಾಡಲಾಗಿದೆ ಆದರೆ ಬಸ್ಸುಗಳಿಗೆ ಯಾಕೆ ನಿರ್ಬಂಧ ಹೇರಿದ್ದು ಗೊತ್ತಾಗುತ್ತಿಲ್ಲ ಇದರಿಂದ ಸಾಮಾನ್ಯ ವರ್ಗದವರಿಗೆ ಪ್ರತಿನಿತ್ಯ ಕೆಲಸಕ್ಕೆ ಹೋಗುವವರಿಗೆ ಬಹಳ ಕಷ್ಟ ಆಗಿದೆ ಎಂದು ಸ್ಥಳೀಯ ರಜನಿಕಾಂತ್ ತಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಗಡಿಯಾದ ಹೆಜಮಾಡಿ ಕಾರ್ಕಳ ಬಜಗೋಳಿಯಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆ. ಶಿವಮೊಗ್ಗ ಗಡಿಯನ್ನು ಸೋಮೇಶ್ವರದಲ್ಲಿ ಬಂದ್ ಮಾಡಲಾಗಿದೆ. ಚಿಕ್ಕಮಗಳೂರು ಗಡಿಯನ್ನು ಕುಂದಾಪುರದಲ್ಲೂ ಉತ್ತರ ಕನ್ನಡ ಜಿಲ್ಲೆಯ ಗಡಿಯನ್ನು ಬೈಂದೂರಿನಲ್ಲಿ ತಡೆಹಿಡಿಯಲಾಗಿದೆ. ಹೊರ ಜಿಲ್ಲೆಯಿಂದ ಬಂದು ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪಸರಿಸುವುದನ್ನು ಈ ಮಾರ್ಗದ ಮೂಲಕ ತಡೆಗಟ್ಟಬಹುದು ಎಂಬುದು ಉಡುಪಿ ಜಿಲ್ಲೆಯ ತಜ್ಞರು ಕೊಟ್ಟ ಪ್ಲಾನ್. ಏಪ್ರಿಲ್ ತಿಂಗಳಲ್ಲಿ ನಡೆಸಿದ ಸೀಲ್‍ಡೌನ್ ಉಡುಪಿ ಜಿಲ್ಲೆಯಲ್ಲಿ ಸಕ್ಸಸ್ ಆಗಿದ್ದು, ಅದನ್ನು ಮತ್ತೆ ಕಾರ್ಯರೂಪಕ್ಕೆ ತರಲು ಉಡುಪಿ ಜಿಲ್ಲಾಡಳಿತ ಮುಂದಾಗಿದೆ.

Comments

Leave a Reply

Your email address will not be published. Required fields are marked *