ಕೊರೊನಾ ವಾರಿಯರ್ ನಿಧನ- ತಾಳಿ ಒತ್ತೆ ಇಟ್ಟು ಅಂತಿಮ ಕಾರ್ಯ ನೆರವೇರಿಸಿದ ಪತ್ನಿ

-ಕರ್ತವ್ಯ ವೇಳೆ ಹೃದಯಾಘಾತ

ಗದಗ: ಹೃದಯಾಘಾತದಿಂದ ಮೃತಪಟ್ಟಿದ್ದ ಕೊರೊನಾ ವಾರಿಯರ್ ತಿಥಿಕಾರ್ಯವನ್ನು ಅವರ ಪತ್ನಿ ತಾಳಿ ಅಡವಿಟ್ಟು ಮಾಡಿದ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.

ಮೇ 27 ರಂದು ಕರ್ತವ್ಯ ನಿರ್ವಹಿಸುತ್ತಿದ್ದ ಅಂಬ್ಯುಲೆನ್ಸ್ ಚಾಲಕ ಉಮೇಶ್ ಹಡಗಲಿ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ರು. ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್ ಸಾವನ್ನಪ್ಪಿ 5 ದಿನ ಕಳೆದರೂ ಮೃತನ ಮನೆಯತ್ತ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಯಾವ ಜನಪ್ರತಿನಿಧಿಯೂ ಭೇಟಿ ನೀಡಿಲ್ಲ. ಸೌಜನ್ಯಕ್ಕೂ ಕುಟುಂಬಕ್ಕೆ ಸಾಂತ್ವಾನ ಹೇಳಿಲ್ಲ.

ಕುಟುಂಬಕ್ಕೆ ಪರಿಹಾರ ಒದಗಿಸಬೇಕೆಂದು ಆರೋಗ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದು ನಮ್ಮ ವ್ಯಾಪ್ತಿಗೆ ಬರಲ್ಲ. ಜಿವಿಕೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರೋದರಿಂದ ಅವರಿಗೆ ಪತ್ರ ಬರೆದು ಪರಿಹಾರ ಕೊಡಿಸೋದಾಗಿ ಡಿಎಚ್‍ಓ ಹೇಳಿದ್ದಾರೆ ಅಂತ ಕುಟುಂಬಸ್ಥರು ತಿಳಿಸಿದ್ದಾರೆ. ಈ ಮಧ್ಯೆ ತಾಳಿ ಒತ್ತೆ ಇಟ್ಟು ಪತಿಯ ತಿಥಿ ಕಾರ್ಯ ಮಾಡುವ ಅನಿವಾರ್ಯತೆ ಉಮೇಶ್ ಅವರ ಪತ್ನಿ ಜ್ಯೋತಿ ಅವರಿಗೆ ಎದುರಾಗಿದೆ. ಎರಡು ಚಿಕ್ಕ ಮಕ್ಕಳ ಜೊತೆ ಜ್ಯೋತಿ ಕಣ್ಣೀರು ಹಾಕುತ್ತಿದ್ದಾರೆ. ಕೂಡಲೇ ಮೃತನ ಕುಟುಂಬಕ್ಕೆ ಪರಿಹಾರ ನೀಡುಬೇಕು, ಬಡಕುಟುಂಬಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇನ್ನು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪನವರು ಸ್ಪಂದಿಸಿದ್ದಾರೆ. ಹೃದಯಾಘಾತದಿಂದ ಮೃತಪಟ್ಟ ಅಂಬುಲೆನ್ಸ್ ಡ್ರೈವರ್ ಉಮೇಶ್ ಅವರ ಪತ್ನಿ ಜ್ಯೋತಿ ಜೊತೆಗೆ ಸಿಎಂ ಮಾತನಾಡಿ ಸಾಂತ್ವಾನ ಹೇಳಿದ್ದಾರೆ. ಇದರ ಜೊತೆಗೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿ ನೆರವುಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *