ಕೊರೊನಾ ಲಾಕ್‍ಡೌನ್ ದೇಶದ ಆರ್ಥಿಕತೆಗೆ 30 ಲಕ್ಷ ಕೋಟಿ ರೂ. ನಷ್ಟ- ಎಸ್‍ಬಿಐ

ನವದೆಹಲಿ: ಕೊರೊನಾ ಲಾಕ್‍ಡೌನ್‍ನಿಂದಾಗಿ ಈವರೆಗೂ ಭಾರತದ ಆರ್ಥಿಕತೆಗೆ 30 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‍ಬಿಐ) ಸಂಶೋಧನಾ ವರದಿಯ ಪ್ರಕಾರ, ರಾಷ್ಟ್ರೀಯ ಅಂಕಿ ಅಂಶಗಳ ಸಂಘಟನೆ (ಎನ್‍ಎಸ್‍ಒ) ಮೇ 29 ರಂದು ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯ ವರದಿ ಬಿಡುಗಡೆಗೊಳಿಸಲಿದೆ. ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 4.7ರಷ್ಟಿತ್ತು. ಆದರೆ ಕೊರೊನಾ ಹೊಡೆತದಿಂದ ಜಿಡಿಪಿ ಮತ್ತೆ ಕುಸಿತ ಕಾಣಲಿದೆ ಎನ್ನಲಾಗುತ್ತಿದೆ.

ಕೊರೊನಾ ಲಾಕ್‍ಡೌನ್‍ನಿಂದ ಮಹಾರಾಷ್ಟ್ರಕ್ಕೆ ಶೇಕಡಾ 11.6ರಷ್ಟು ನಷ್ಟವಾಗಿದ್ದರೆ, ತಮಿಳುನಾಡಿಗೆ ಶೇ.9.4ರಷ್ಟು, ಗುಜರಾತ್ ಶೇ.8.6ರಷ್ಟು, ಉತ್ತರಪ್ರದೇಶಕ್ಕೆ ಶೇ.8.3ರಷ್ಟು ಮತ್ತು ಕರ್ನಾಟಕಕ್ಕೆ ಶೇ.6.7ರಷ್ಟು ನಷ್ಟವಾಗಿದೆ. ಈ ಐದು ರಾಜ್ಯಗಳಿಗೆ ಆಗಿರುವ ನಷ್ಟವೇ 11 ಲಕ್ಷ ಕೋಟಿ ರೂಪಾಯಿಯಷ್ಟು. ಅಂದರೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ಪ್ಯಾಕೇಜ್‍ನ ಶೇಕಡಾ 40ರಷ್ಟು ಈ ಮೊತ್ತವಾಗಿದೆ. ಮುಂದಿನ ವರ್ಷದ ಮಾರ್ಚ್ 31ರ ವೇಳೆಗೆ 10.4 ಲಕ್ಷ ಕೋಟಿ ರೂಪಾಯಿಯಷ್ಟು ನೇರ ತೆರಿಗೆ ಆದಾಯ ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದೆ.

ಭಾರತವು ಸ್ವಾತಂತ್ರ್ಯಾನಂತರ ಮೂರು ಆರ್ಥಿಕ ಹಿಂಜರಿತಗಳನ್ನು ಎದುರಿಸಿದ್ದು, ನಾಲ್ಕನೆಯ ಹಿಂಜರಿತ ಸಮೀಪಿಸಿದೆ ಎಂದು ‘ಕ್ರಿಸಿಲ್’ ಎಚ್ಚರಿಸಿದೆ. ಕಳೆದ 69 ವರ್ಷಗಳಲ್ಲಿ ಭಾರತ ಕೇವಲ 3 ಸಲ ಮಾತ್ರ ಆರ್ಥಿಕ ಹಿಂಜರಿತ ಎದುರಿಸಿದೆ. 1958, 1966 ಮತ್ತು 1980ರಲ್ಲಿ ಹಿಂಜರಿತವಾಗಿದೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *