ಕೊರೊನಾ ಲಸಿಕೆ ತಯಾರಿಕೆ ಕೇಂದ್ರಗಳಿಗೆ ಪ್ರಧಾನಿ ಮೋದಿ ಭೇಟಿ

ನವದೆಹಲಿ: ಇಡೀ ದೇಶವನ್ನೇ ಹೈರಾಣಾಗಿಸಿರೋ ‘ಚೀನಿ ವೈರಸ್’ ಕೊರೊನಾ ಸೋಂಕಿನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ‘ಪರಿಣಾಮಕಾರಿ ಲಸಿಕೆ’ಯ ಶಿಕಾರಿಯಲ್ಲಿದ್ದಾರೆ. ದೇಶದಲ್ಲಿ ಕೊರೆನಾ ಸಂಜೀವಿನಿ ತಯಾರಿಸ್ತಿರೋ ಮುಂಚೂಣಿ ವ್ಯಾಕ್ಸಿನ್ ತಯಾರಿಕಾ ಘಟಕಗಳಿಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲಿಗೆ ಗುಜರಾತ್‍ನ ಅಹಮದಾಬಾದ್‍ನಿಂದ 20 ಕಿ.ಮೀ. ದೂರದ ಝೈಡಸ್ ಬಯೋಟೆಕ್ ಪಾರ್ಕ್‍ಗೆ ಭೇಟಿ ನೀಡಿದರು. ಝೈಡಸ್ ಕ್ಯಾಡಿಲಾ ಕಂಪನಿಯು ‘ಝೈಕೋವಿಡ್-ಡಿ’ ಎಂಬ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಅದು 2ನೇ ಹಂತ ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ. ‘ಝೈಕೋವಿಡ್-ಡಿ-ಡಿಎನ್‍ಎ ಆಧಾರಿತ ಲಸಿಕೆಯಾಗಿದೆ.

ಅಲ್ಲಿಂದ ನೇರವಾಗಿ ಹೈದರಾಬಾದ್‍ಗೆ ಆಗಮಿಸಿದ ಪ್ರಧಾನಿಗಳು, ಅಲ್ಲಿಂದ 50 ಕಿ.ಮೀ ದೂರದ ಹಕೀಂಪೇಟ್‍ನ ಜಿನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್ ಘಟಕಕ್ಕೆ ಭೇಟಿ ನೀಡಿದರು. ಭಾರತ್ ಬಯೋಟೆಕ್ ದೇಶೀಯವಾಗಿ ತಯಾರಿಸುತ್ತಿರುವ ‘ಕೋವ್ಯಾಕ್ಸಿನ್’ ಲಸಿಕೆ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದರು. ಬಳಿಕ ಟ್ವೀಟ್ ಮಾಡಿರೋ ಪ್ರಧಾನಿ, ಈವರೆಗಿನ ಸಂಶೋಧನೆಗೆ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಲಸಿಕೆಯ ತ್ವರಿತ ಪ್ರಗತಿಗೆ ಅನುಕೂಲವಾಗುಂತೆ ಇಲ್ಲಿನ ತಂಡ, ಐಸಿಎಂಆರ್ ಜೊತೆ ನಿಕಟ ಸಂಪರ್ಕದಲ್ಲಿದೆ ಎಂದರು.

ಹೈದರಾಬಾದ್‍ನಿಂದ ಪುಣೆಯ ಸೀರಂ ಇನ್‍ಸ್ಟಿಟ್ಯೂಟ್‍ಗೆ ಭೇಟಿ ನೀಡಿದರು. ಸೀರಂ ಇನ್‍ಸ್ಟಿಟ್ಯೂಟ್ ವಿಶ್ವದ ಅತೀದೊಡ್ಡ ಲಸಿಕಾ ಉತ್ಪಾದನಾ ಕೇಂದ್ರವಾಗಿದೆ. ಬ್ರಿಟನ್‍ನ ಆಕ್ಸಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಮತ್ತು ಪ್ರಯೋಗಕ್ಕೆ ಒಳಪಡಿಸುವ ಗುತ್ತಿಗೆಯನ್ನು ಸೀರಂ ಪಡೆದುಕೊಂಡಿದೆ. ಆ ಬಳಿಕ ಈ ಮೂರು ಕಡೆ ವ್ಯಾಕ್ಸಿನ್ ತಯಾರಿಕೆ, ಪ್ರಯೋಗ, ಹಂಚಿಕೆಗೆ ಸಿದ್ಧತೆ, ಎದುರಾದ ಸವಾಲುಗಳು, ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆದರು.

Comments

Leave a Reply

Your email address will not be published. Required fields are marked *