ಕೊರೊನಾ ರೋಗಿಗಳು, ಕ್ವಾರಂಟೈನ್‍ನಲ್ಲಿರೋರ ಕೈಗೆ ಟ್ಯಾಗ್: ಅಶೋಕ್

– ಟ್ಯಾಗ್ ಕಟ್ ಮಾಡಿದ್ರೆ, ಹೊರ ಹೋದ್ರೆ ಬೀಪ್ ಸೌಂಡ್
– ಮನೆಯಲ್ಲಿ ರಾತ್ರಿ ಪಾರ್ಟಿ ಹೆಚ್ಚಾಗಿದ್ದಕ್ಕೆ ಕರ್ಫ್ಯೂ ಜಾರಿ

ಬೆಂಗಳೂರು: ಕೊರೊನಾ ರೋಗಿಗಳು ಮತ್ತು ಕ್ವಾರಂಟೈನ್ ನಲ್ಲಿರುವವರ ಕೈಗೆ ಟ್ಯಾಗ್ ಕಟ್ಟುತ್ತೇವೆ. ಇದರಿಂದ ಅವರ ಚಲನವಲನ ತಿಳಿಯಲು ಸಹಾಯವಾಗಲಿದೆ. ಇದರಿಂದ ಯಾವ ಕೊರೊನಾ ರೋಗಿ ಕೂಡ ತಪ್ಪಿಸಿಕೊಂಡು ಹೋಗಲು ಆಗಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಅಂತಹ ಟ್ಯಾಗ್ ವ್ಯವಸ್ಥೆ ಸಿದ್ಧವಾಗಲಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ದೇಶದಲ್ಲೇ ಮಾದರಿಯಾದ ಒಂದು ಟ್ಯಾಗ್ ವ್ಯವಸ್ಥೆ ಮಾಡುತ್ತಿದ್ದೇವೆ. ಕೊರೊನಾ ರೋಗಿಗಳು ಮತ್ತು ಕ್ವಾರಂಟೈನ್ ನಲ್ಲಿರುವವರ ಕೈಗೆ ಟ್ಯಾಗ್ ಕಟ್ಟುತ್ತೇವೆ. 14 ದಿನ ಟ್ಯಾಗ್ ಆಕ್ಟಿವ್ ಇರುತ್ತದೆ. ಇದರಿಂದ ಅವರ ಚಲನವಲನ ತಿಳಿಯಲು ಸಹಾಯವಾಗಲಿದೆ. ಒಂದು ವೇಳೆ ಟ್ಯಾಗ್ ಕಟ್ ಮಾಡಿದರೆ, ಯಾರಾದರೂ ಕ್ವಾರಂಟೈನ್ ಸೆಂಟರ್ ನಿಂದ ಹೊರ ಹೋದರೆ ಬೀಪ್ ಸೌಂಡ್ ಅಥವಾ ಅಲಾರಂ ಸೈರನ್ ಬರುತ್ತೆ. ಅಧಿಕಾರಿಗಳಿಗೆ ಟ್ಯಾಗ್‍ನಿಂದ ಮೆಸೇಜ್ ಬರುವ ವ್ಯವಸ್ಥೆ ಮಾಡುತ್ತಿದ್ದೇವೆ. ಯಾವ ಕೊರೊನಾ ರೋಗಿ ಕೂಡ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಅಂತಹ ಟ್ಯಾಗ್ ವ್ಯವಸ್ಥೆ ಸಿದ್ಧವಾಗಲಿದೆ ಎಂದು ತಿಳಿಸಿದರು.

ಆಶಾ ಕಾರ್ಯಕರ್ತೆಯರು, ಪೊಲೀಸರು, ವೈದ್ಯರು, ನರ್ಸ್ ಗಳಿಗೆ ಹೆಚ್ಚಿನ ವ್ಯವಸ್ಥೆ ಮಾಡುತ್ತಿದ್ದೇವೆ. ಎರಡು ನಿಮಿಷದಲ್ಲಿ ಶ್ವಾಸಕೋಶದ ಕಂಜೆಷನ್ ಟೆಸ್ಟ್ ಮಾಡುವ ಮಷಿನ್ ಬಂದಿದೆ. ಈ ಮಷಿನ್‍ನಲ್ಲಿ ಯಾರಿಗೆ ಸೋಂಕಿನ ಅನುಮಾನ ಇರುತ್ತದೋ ಅಂತವರಿಗೆ ಕೊರೊನಾ ಟೆಸ್ಟ್ ಗೆ ಕಳಿಸುತ್ತೇವೆ. ಈ ಪ್ರಯೋಗವನ್ನೂ ಕೂಡ ಮಾಡುತ್ತಿದೆ. ಶನಿವಾರ ಈ ಯಂತ್ರದ ಕಂಪನಿಯವರಿಂದ ಸಿಎಂ ಎದುರು ಡೆಮೋ ನಡೆದಿದೆ. ಶೇ.95ರಷ್ಟು ಪಕ್ಕಾ ಫಲಿತಾಂಶ ಸಿಗಲಿದೆ. ನಮಗೆ ಶೇ.80ರಷ್ಟು ಸಿಕ್ಕಿದರೂ ಸಾಕು. ಏನೆಲ್ಲ ಸಾಧ್ಯತೆ ಇದೆಯೋ ಅದೆಲ್ಲವನ್ನೂ ಬಳಸಿಕೊಳ್ಳುತ್ತಿದ್ದೇವೆ. ಏಕಮುಖವಾಗಿ ಕೊರೊನಾ ನಿಯಂತ್ರಿಸುವುದೇ ನಮ್ಮ ಉದ್ದೇಶ. ಸರ್ಕಾರ ಸರ್ವ ಪ್ರಯತ್ನಗಳನ್ನೂ ಕೂಡ ಮಾಡುತ್ತಿದೆ. ಆಯುರ್ವೇದ ಚಿಕಿತ್ಸೆಯ ಬಗ್ಗೆಯೂ ಗಂಭೀರವಾಗಿ ಚರ್ಚೆ ಮಾಡುತ್ತಿದ್ದೇವೆ. ಮೌಖಿಕವಾಗಿ ಇದೆಲ್ಲವನ್ನೂ ತೀರ್ಮಾನ ಮಾಡಿದ್ದೇವೆ ಎಂದರು.

ಹಲವರು ಮನೆಗಳಲ್ಲಿಯೇ ಪಾರ್ಟಿ ಮಾಡುತ್ತಿದ್ದಾರೆ. ಇದು ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಹೀಗಾಗಿ ರಾತ್ರಿ 8 ಗಂಟೆಗೆ ಕರ್ಫ್ಯೂ ಜಾರಿ ಮಾಡಿದ್ದೇವೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಗಮನದಲ್ಲಿಟ್ಟುಕೊಂಡು ಕರ್ಫ್ಯೂ ಜಾರಿ ತಂದಿದ್ದೇವೆ ಎಂದರು. ಇನ್ನೂ ನಿನ್ನೆ ಬೆಂಗಳೂರಿನಲ್ಲಿ 596 ಪ್ರಕರಣ ಯಾಕೆ ಪತ್ತೆಯಾಯ್ತು ಅಂತ ವೈದ್ಯರು ಪರಿಶೀಲನೆ ಮಾಡುತ್ತಿದ್ದಾರೆ. ಇದಕ್ಕೆ ಇನ್ನೆರಡು ದಿನಗಳಲ್ಲಿ ಕಾರಣ ಸಿಗಲಿದೆ. ಇದರಲ್ಲಿ ಸರ್ಕಾರ ಮುಚ್ಚಿಡುವಂತಹದ್ದು ಏನು ಇಲ್ಲ. ಯಾಕೆ 596 ಮಂದಿಗೆ ಸೋಂಕು ಬಂತು, ಹೇಗೆ ಬಂತು ಅಂತ ಇನ್ನೆರಡು ದಿನಗಳಲ್ಲಿ ಮಾಹಿತಿ ಬಹಿರಂಗವಾಗಲಿದೆ ಎಂದು ಅಶೋಕ್ ತಿಳಿಸಿದರು.

ಸಮುದಾಯಕ್ಕೆ ಕೊರೊನಾ ಹಬ್ಬಿರುವ ಅನುಮಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಸಮುದಾಯ ಮಟ್ಟದಲ್ಲಿ ಕೊರೊನಾ ಹಬ್ಬಿರುವ ಕುರಿತು ತಜ್ಞರು ವರದಿ ಕೊಡಲಿದ್ದಾರೆ. ಇನ್ನು ಮೂರು ದಿನಗಳಲ್ಲಿ ತಜ್ಞರಿಂದ ವರದಿ ಬರಲಿದೆ. ಶನಿವಾರವೂ ಸಿಎಂ ಬಳಿ ತಜ್ಞರು ಈ ಬಗ್ಗೆ ಚರ್ಚಿಸಿದ್ದಾರೆ. ಇಡೀ ಬೆಂಗಳೂರಿನಲ್ಲಿ ಸರ್ವೆ ಮಾಡಿ ತಜ್ಞರು ವರದಿ ಕೊಡುತ್ತಾರೆ ಎಂದರು.

ಕೋವಿಡ್ ಉಸ್ತುವಾರಿ ಸಚಿವರ ನಡುವೆ ಮುಸುಕಿನ ಗುದ್ದಾಟದ ಬಗ್ಗೆ ಮಾತನಾಡಲು ನಿರಾಕರಿಸಿದ ಅಶೋಕ್, ನೋಡಿ ಇದು ಯುದ್ಧದ ಸಂದರ್ಭ, ಯಾರು ಏನೂ ಅನ್ನೋದು ಮುಖ್ಯವಲ್ಲ. ಯುದ್ಧದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಹೋಗಬೇಕಿದೆ. ನಾನು ಏನೂ ಮಾಡುತ್ತಿಲ್ಲ. ನನ್ನದು ಏನೂ ಇಲ್ಲ ಅಂತಲೇ ಅಂದುಕೊಳ್ಳೋಣ. ಆದರೆ ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ ಅಷ್ಟೇ ಎಂದು ನಾಳೆ ಯಾರ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳ ಸಭೆ ನಡೆಯುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ನಿರಾಕರಿಸಿದರು.

Comments

Leave a Reply

Your email address will not be published. Required fields are marked *