ಕೊರೊನಾ ಮೂರನೇ ಅಲೆ ಬರುತ್ತೆ ನೀವು ಉಳೀತಿರಿಲ್ವೊ ಗೊತ್ತಿಲ್ಲ, ನಾನಂತೂ ಉಳಿಯಬೇಕು: ಉಮೇಶ್ ಕತ್ತಿ

ಬಾಗಲಕೋಟೆ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದೆ. ಈ ನಡುವೆ ಕೊರೊನಾ ಮೂರನೇ ಅಲೆ ಬರುತ್ತದೆ. ನಾವು, ನೀವು ಎಲ್ಲರು ಉಳಿಯಬೇಕು. ನೀವು ಉಳಿಯುತ್ತಿರಿಲ್ವೊ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದು ಸಚಿವ ಉಮೇಶ್ ಕತ್ತಿ ಹಾರಿಸಿದ ಹಾಸ್ಯ ಚಟಾಕಿ ಇದೀಗ ವಿವಾದಿತ ಹೇಳಿಕೆಯಾಗಿದೆ.

ಜಿಲ್ಲೆಯ ಬನಹಟ್ಟಿ ನಗರದಲ್ಲಿ ಕೋವಿಡ್ ವಿಚಾರವಾಗಿ ಅಧಿಕಾರಿಗಳು ಮತ್ತು ವೈದ್ಯರ ಸಭೆ ನಡೆಸಿದ ಉಮೇಶ್ ಕತ್ತಿ, ಕೊರೊನಾ ಎರಡನೇ ಅಲೆ ಬಳಿಕ ಮೂರನೇ ಅಲೆ ಬರುತ್ತೆ ನಾವು-ನೀವು ಉಳಿಯಬೇಕು ಎನ್ನುವುದು ನನ್ನ ಆಶಯ ನೀವು ಉಳಿತಿರಿಲ್ವೊ ಗೊತ್ತಿಲ್ಲ, ನಾನಂತೂ ಉಳಿಯಬೇಕು ಎಂದರು. ಕತ್ತಿ ಮಾತು ಕೇಳಿ ಸಂಸದ ಪಿ.ಸಿ.ಗದ್ದಿಗೌಡರ ಹಣೆ ಚಚ್ಚಿಕೊಂಡರು. ಬಳಿಕ ಸ್ಥಳೀಯರು ಜಿಲ್ಲಾಡಳಿತಕ್ಕೆ ಒಂದು ಆಕ್ಸಿಜನ್ ಕಿಟ್ ದೇಣಿಗೆ ನೀಡಿದರು. ಆಗ ಇಂತಹ ಮಷೀನ್‍ಗಳನ್ನು ಸರ್ಕಾರದಿಂದ ಹೆಚ್ಚೆಚ್ಚು ಒದಗಿಸುವಂತೆ ಸಭೆಯಲ್ಲಿ ಸಲಹೆ ತೂರಿ ಬಂತು. ಆಗ ಉಮೇಶ್ ಕತ್ತಿ ಮೂರನೇ ಅಲೆಗೆ ವ್ಯವಸ್ಥೆ ಮಾಡೋಣ ಎಂದು ಉಡಾಫೆ ಉತ್ತರ ನೀಡಿದರು.

ಸಭೆಯಲ್ಲಿ ಆಕ್ಸಿಜನ್ ಕೊರತೆ ಆಗುತ್ತಿದೆ ಎಂದು ಖಾಸಗಿ ವೈದ್ಯರು ದೂರು ತೊಡಿಕೊಂಡರು. ಸಮಸ್ಯೆ ಇಲ್ಲ, ಅಗತ್ಯ ಇರುವಲ್ಲಿ ಸಿಲಿಂಡರ್ ಕಳುಹಿಸುವುದಾಗಿ ಎಸ್ಪಿ ಲೋಕೇಶ್ ಜಗಲಾಸರ್ ಭರವಸೆ ನೀಡಿದರು. ನಂತರ ಬನಹಟ್ಟಿ ಕೋವಿಡ್ ಸೆಂಟರ್‍ ಗೆ ಕತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿ ಇತರೆ ಸೋಂಕಿತರಿಗೆ ಬೆಡ್ ಗಳ ಅವಕಾಶ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ತೇರದಾಳ ಶಾಸಕ ಸಿದ್ದು ಸವದಿ, ಡಿಸಿ ಮತ್ತು ಎಸ್ಪಿ ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *