ಕೊರೊನಾ ಭಯವೇ ಇಲ್ಲ – ಕೊಡಗಿನಲ್ಲಿ ಪ್ರವಾಸಿಗರಿಂದ ವೀಕೆಂಡ್ ಮಸ್ತಿ

ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಬರಬಹುದು ಎಂಬ ಆತಂಕ ಇದ್ದರೆ ಜನ ಮಾತ್ರ ಕೊರೊನಾ ಬಗ್ಗೆ ತಲೆಕಡೆಸಿಕೊಂಡಂತೆ ಕಾಣುತ್ತಿಲ್ಲ. ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳು ವೀಕೆಂಡ್ ಬಂತೆಂದರೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು, ಜನ ಕೋವಿಡ್ ನಿಯಮಗಳನ್ನು ಸಂಪೂರ್ಣ ಮರೆತುಬಿಟ್ಟಿದ್ದಾರೆ. ಪ್ರಸಿದ್ಧ ಪ್ರವಾಸಿತಾಣ ದುಬಾರೆಯಲ್ಲಿ ಜನರು ಎಲ್ಲವನ್ನೂ ಸಂಪೂರ್ಣ ಮರೆತು ಮಾಸ್ಕ್ ಕೂಡ ಇಲ್ಲದೆ ಎಂಜಾಯ್ ಮಾಡುತ್ತಿದ್ದಾರೆ.

ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಸಾವಿರಾರು ಪ್ರವಾಸಿಗರು ನೀರಿನಲ್ಲಿ ಇಳಿದು ರಜೆಯ ದಿನಗಳನ್ನು ಮಜಾ ಮಾಡುತ್ತಿದ್ದಾರೆ. ಪ್ರವಾಸಿ ಸ್ಥಳಗಳಲ್ಲಿ ಯಾರೋಬ್ಬರ ಮುಖದ ಮೇಲೂ ಮಾಸ್ಕ್ ಇಲ್ಲ, ಇದ್ದರೂ ಅದು ಕೇವಲ ಕುತ್ತಿಗೆ ಭಾಗಕ್ಕೆ ಹಾಕಿಕೊಂಡು ಓಡಾಡುತ್ತಿದ್ದಾರೆ. ಇನ್ನೂ ಸಾಮಾಜಿಕ ಅಂತರವಂತೂ ಇಲ್ಲವೇ ಇಲ್ಲ. ಜೊತೆಗೆ ರ್ಯಾಫ್ಟಿಂಗ್ ಕೂಡ ನಡೆಯುತ್ತಿದ್ದು ಒಂದು ರ್ಯಾಫ್ಟ್ ಗೆ ಕನಿಷ್ಠ 12 ರಿಂದ 15 ಜನರು ಕುಳಿತು ನದಿಯಲ್ಲಿ ಸಂಚರಿಸುತ್ತಿದ್ದಾರೆ.

ರ್ಯಾಫ್ಟ್ ನಲ್ಲಿ ಕುಳಿತುಕೊಳ್ಳುವಾಗ ಹಲವು ಜಿಲ್ಲೆ, ರಾಜ್ಯಗಳಿಂದ ಬರುವ ಪ್ರವಾಸಿಗರು ಒಟ್ಟೊಟ್ಟಿಗೆ ಮಾಸ್ಕ್ ಮತ್ತು ಅಂತರ ಕಾಯ್ದುಕೊಳ್ಳದೆ ಎಂಜಾಯ್ ಮಾಡುತ್ತಿದ್ದಾರೆ. ಇದು ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಹರಡಲು ಮಾರ್ಗವಾಗಿ ಬಿಡುತ್ತಾ ಎನ್ನುವ ಅನುಮಾನ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ಫೆಬ್ರವರಿ ಆರಂಭದಲ್ಲಿ ಶೂನ್ಯಕ್ಕೆ ಇಳಿದಿದ್ದ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಳೆದ ಒಂದು ವಾರದಿಂದ ನಿತ್ಯ ಏಳರಿಂದ ಎಂಟು ಪ್ರಕರಣಗಳು ದಾಖಲಾಗತ್ತಿದ್ದು ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

Comments

Leave a Reply

Your email address will not be published. Required fields are marked *