ಕೊರೊನಾ ಪಾಸಿಟಿವ್ ಇದೆ ಬಿಡಿ ಸಾರ್ ಎಂದ ಸೋಂಕಿತ- ಎಎಸ್‍ಐ ತಬ್ಬಿಬ್ಬು

– ಪೊಲೀಸರ ವಾಹನ ತಪಾಸಣೆ ವೇಳೆ ಸೋಂಕಿತ ಪ್ರತ್ಯಕ್ಷ

ಶಿವಮೊಗ್ಗ: ವೀಕೆಂಡ್ ಕರ್ಫ್ಯೂ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರ ಎದುರು ಸೋಂಕಿತ ವ್ಯಕ್ತಿಯೋರ್ವ ಪ್ರತ್ಯಕ್ಷನಾಗಿದ್ದಕ್ಕೆ ಕ್ಷಣಕಾಲ ಸಂಚಾರಿ ಪೊಲೀಸ್ ತಬ್ಬಿಬ್ಬಾದ ಘಟನೆ ನಗರದ ಅಮೀರ್ ಅಹಮ್ಮದ್ ವೃತ್ತದಲ್ಲಿ ನಡೆದಿದೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಎಲ್ಲ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಇದರ ನಡುವೆಯೂ ವಿನಾ ಕಾರಣ ಕೆಲವರು ಓಡಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿ ಬೇಕಾಬಿಟ್ಟಿ ಓಡಾಡುತ್ತಿದ್ದವರಿಗೆ ದಂಡ ವಿಧಿಸುತ್ತಿದ್ದಾರೆ.

ಮಧ್ಯಾಹ್ನದ ವೇಳೆ ಬೈಕ್ ನಲ್ಲಿ ವ್ಯಕ್ತಿಯೋರ್ವ ಅಮೀರ್ ಅಹಮದ್ ವೃತ್ತದ ಬಳಿ ಬಂದಿದ್ದಾನೆ. ವಾಹನದಲ್ಲಿ ಬಂದ ವ್ಯಕ್ತಿಯನ್ನು ತಡೆದ ಪೊಲೀಸರು ಆತನ ದಾಖಲೆಗಳನ್ನು ಕೇಳಿದ್ದಾರೆ. ನಾನು ಕೋವಿಡ್ ಸೋಂಕಿತ ಎಂದು ಹೇಳುವ ಮೂಲಕ ಅಲ್ಲಿದ್ದವರನ್ನು ಬೆಚ್ಚಿ ಬೀಳಿಸಿದ್ದಾನೆ. ಅಲ್ಲದೆ ಪೊಲೀಸರಿಗೆ ವಾಹನದ ದಾಖಲೆ ತಪಾಸಣೆ ನೀಡುವ ವೇಳೆ ಕೋವಿಡ್ ಪಾಸಿಟಿವ್ ದಾಖಲೆ ಸಹ ಪ್ರದರ್ಶಿಸಿದ್ದಾನೆ. ಈ ವೇಳೆ ದಾಖಲೆ ತಪಾಸಣೆ ನಡೆಸುತ್ತಿದ್ದ ಪೊಲೀಸರು ಕ್ಷಣ ಕಾಲ ದಂಗಾಗಿದ್ದಾರೆ.

ಸೋಂಕು ಇದೆ ಎಂದ ಮೇಲೆ ಹೋಮ್ ಕ್ವಾರಂಟೈನ್ ಆಗಬೇಕು, ರಸ್ತೆಯಲ್ಲಿ ಏಕೆ ಓಡಾಡುತ್ತಿದ್ದೀಯಾ ಎಂದು ಗದರಿದ ಪೊಲೀಸರು, ತಕ್ಷಣ ಮನೆಗೆ ತೆರಳಿ ಕ್ವಾರಂಟೈನ್ ಆಗು ಎಂದು ಹೇಳಿ ಕಳುಹಿಸಿದ್ದಾರೆ. ಪಾಸಿಟಿವ್ ಬಂದ ವ್ಯಕ್ತಿಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದೆ ಅಥವಾ ಹೋಮ್ ಕ್ವಾರಂಟೈನ್ ಮಾಡದೇ ನಿರ್ಲಕ್ಷ್ಯ ತೋರಿದ ಆರೋಗ್ಯ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *