ಕೊರೊನಾ ಪತ್ತೆಯಾಗಿಲ್ಲ ಅಂತ ನಿಟ್ಟುಸಿರು ಬಿಡುವಂತಿಲ್ಲ- ಸೆಕೆಂಡ್ ಫೇಸ್‍ಗೆ ರೆಡಿಯಾಗಿದೆ ಉಡುಪಿ!

ಉಡುಪಿ: ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿ ಇದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಒಂದೂ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಹಾಗಂತ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಿಲ್ಲ, ಯಾಕೆಂದರೆ ಸೆಕೆಂಡ್ ಫೇಸ್‍ನಲ್ಲಿ ಹೊಡೆತ ಕೊಡೋದಿಕ್ಕೆ ಮಹಾರಾಷ್ಟ್ರದ ಮಂದಿ ಸಿದ್ಧರಾಗಿದ್ದಾರೆ.

ಹೌದು. ಕೊರೊನಾ ಮಹಾಮಾರಿ ಕರ್ನಾಟಕದಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಅದರಲ್ಲೂ ಕರಾವಳಿ ಜಿಲ್ಲೆ ಉಡುಪಿ 947 ಕೊರೊನಾ ಪ್ರಕರಣಗಳೊಂದಿಗೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಒಂದು ಪಾಸಿಟಿವ್ ಕೇಸ್ ದಾಖಲಾಗಿಲ್ಲ. ಹಾಗಂತ ನೆಮ್ಮದಿ ಪಡುವ ಹಾಗೆ ಇಲ್ಲ. ಉಡುಪಿ ಡಿಸಿ ಟೇಬಲ್ ಮೇಲೆ ಕನಿಷ್ಟ ಐದು ಸಾವಿರ ಅಪ್ಲಿಕೇಷನ್‍ಗಳು ಸಿದ್ಧವಿದ್ದು, ಮಹಾರಾಷ್ಟ್ರದಿಂದ 7 ಸಾವಿರ ಜನ ಬರೋದಕ್ಕೆ ರೆಡಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಕೇಸುಗಳ ಪೈಕಿ 327 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 619 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 1,200 ಮಂದಿ ಹೊರ ರಾಜ್ಯದಿಂದ ಬಂದವರು ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಹೊರ ರಾಜ್ಯದಿಂದ ಏಳೆಂಟು ಸಾವಿರ ಮಂದಿ ಬಂದರೆ ಅದರಲ್ಲಿ ಶೇ.10ರಷ್ಟು ಮಂದಿಯಲ್ಲಿ ಕೊರೊನಾ ಕಾಣಿಸಿಕೊಳ್ಳಲಿದೆ. ಹೊರರಾಜ್ಯದಿಂದ ಬರುವ ಶೇ.10 ಜನರಲ್ಲಿ ಸೋಂಕು ಕಂಡುಬರುತ್ತಿದೆ. ಹಾಗಾಗಿ ಉಡುಪಿಯಲ್ಲಿ 1200 ಬೆಡ್ ಕೆಪಾಸಿಟಿಯ 5 ಆಸ್ಪತ್ರೆಗಳನ್ನು ಕೋವಿಡ್‍ಗಳಿಗಾಗಿ ಮೀಸಲಿಡಲಾಗಿದೆ.

ಈವರೆಗಿನ ಚಿಕಿತ್ಸೆಯನ್ನು ಸರ್ಕಾರ ಮತ್ತು ಟಿಎಂಎಪೈ ಖಾಸಗಿ ಆಸ್ಪತ್ರೆ ಉಚಿತವಾಗಿ ಕೊಟ್ಟಿದೆ. ಲಾಕ್‍ಡೌನ್ ಸಂಪೂರ್ಣ ತೆರವು ಆದ ಮೇಲೆ ರೋಗಿಗಳ ಚಿಕಿತ್ಸಾ ವೆಚ್ಚ ಏನು ಎತ್ತ ಎಂಬುದನ್ನು ಸರ್ಕಾರ ಇನ್ನೂ ಪ್ರಕಟಿಸಿಲ್ಲ. ಹೀಗಾಗಿ ಕೊರೊನಾ ನಂಬರ್ ಒನ್ ಜಿಲ್ಲೆ ಎಂಬ ಕಳಂಕ ಹೊತ್ತಿರುವ ಉಡುಪಿ ಮತ್ತೆ ಗ್ರೀನ್ ಝೋನ್ ಆಗಲು ಮತ್ತಷ್ಟು ಸಮಯ ಬೇಕಾಗಬಹುದು.

Comments

Leave a Reply

Your email address will not be published. Required fields are marked *