ಕೊರೊನಾ ಪತ್ತೆಗೆ ಹುಚ್ಚ ವೆಂಕಟ್ ಐಡಿಯಾ

ಬೆಂಗಳೂರು: ನಟ ಹುಚ್ಚಾ ವೆಂಕಟ್ ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಾರೆ. ಈ ಹಿಂದೆ ಗಲಾಟೆ ಮಾಡುವ ಮೂಲಕ ಸುದ್ದಿಯಾಗಿದ್ದರು. ಆಗಾಗ ಸಮಾಜದ ಆಗುಹೋಗುಗಳ ಕುರಿತು ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಅದೇ ರೀತಿ ಇದೀಗ ಕೊರೊನಾ ನಿಯಂತ್ರಣದ ಬಗ್ಗೆ ತಮ್ಮ ಅನಿಸಿಕೆ ಹೇಳಿಕೊಂಡಿದ್ದು, ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಜಗತ್ತಿನಾದ್ಯಂತ 40 ಲಕ್ಷಕ್ಕೂ ಅಧಿಕ ಜನ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕು ತಗುಲಿರುವುದನ್ನು ಪತ್ತೆ ಹಚ್ಚಿ, ಅವರನ್ನು ಕ್ವಾರಂಟೈನ್ ಮಾಡುವುದೇ ದೊಡ್ಡ ಸವಾಲಾಗಿದೆ. ಇದನ್ನು ನಿಯಂತ್ರಿಸಲು ಹಾಗೂ ಔಷಧಿ ಕಂಡುಹಿಡಿಯಲು ತಜ್ಞರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇದರ ಮಧ್ಯೆಯೇ ಇದೀಗ ಹುಚ್ಚ ವೆಂಕಟ್ ಕೊರೊನಾ ಸೋಂಕು ಪತ್ತೆಗೆ ಐಡಿಯಾ ನೀಡಿದ್ದಾರೆ.

ಈ ವಿಡಿಯೋವನ್ನು ತಮ್ಮದೇ ಯೂಟ್ಯೂಬ್ ಚಾನೆಲ್‍ನಲ್ಲಿ ಹಂಚಿಕೊಂಡಿದ್ದು, ಟಿಕ್‍ಟಾಕ್‍ನಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಮಾತನಾಡಿರುವ ವೆಂಕಟ್, ಇದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಹೇಳುತ್ತಿರುವುದು. ಇಸ್ರೋ ವಿಜ್ಞಾನಿಗಳು ಈವರೆಗೂ ಏನೇನೋ ಕಂಡು ಹಿಡಿದಿದ್ದಾರೆ. ಹಲವು ವಿಜ್ಞಾನಿಗಳು ಹೊಸ ಆವಿಷ್ಕಾರಗಳನ್ನು ಮಾಡಿದ್ದಾರೆ. ಅದೇ ರೀತಿ ಕೊರೊನಾ ವೈರಸ್ ಪತ್ತೆ ಹಚ್ಚಲು ಸಣ್ಣ ಯಂತ್ರವನ್ನು ಕಂಡುಹಿಡಿಯಬೇಕಿದೆ. ಈಗ ಬಿಪಿ ಚೆಕ್ ಮಾಡಲು ಸಣ್ಣ ಯಂತ್ರ ಇದೆ. ಅದೇ ರೀತಿ ಕೊರೊನಾ ಕಂಡು ಹಿಡಿಯಲು ಯಂತ್ರ ಕಂಡುಹಿಡಿಯಬೇಕು ಎಂದು ಹೇಳಿದ್ದಾರೆ.

ಇದರಿಂದ ನಾವು ನಮ್ಮ ಮನೆಗಳಲ್ಲೇ ಕುಳಿತು ಕೊರೊನಾ ಇದೆಯೋ, ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಈ ಕುರಿತು ಇಸ್ರೋ ವಿಜ್ಞಾನಿಗಳು ಹಾಗೂ ವೈದ್ಯರು ಜೊತೆಗೂಡಿ ಇಂತಹದ್ದೊಂದು ಯಂತ್ರವನ್ನು ಕಂಡುಹಿಡಿಯಬೇಕು. ಇದರಿಂದಾಗಿ ಬೇಗ ಸೋಂಕು ಪತ್ತೆಯಾಗುತ್ತದೆ, ತಕ್ಷಣವೇ ಆಸ್ಪತ್ರೆಗೆ ಹೋಗಬಹುದು. ಆಗ ಕೊರೊನಾ ಹರಡುವಿಕೆ ಕಡಿಮೆಯಾಗುತ್ತದೆ. ಅಲ್ಲದೆ ವೈದ್ಯರು ಇತರರ ಆರೋಗ್ಯ ಕಾಪಾಡುವುದರ ಜೊತೆಗೆ ತಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *