ಕೊರೊನಾ ನಿಯಮ ಉಲ್ಲಂಘನೆ – ಯುವಕನ ಕಪಾಳಕ್ಕೆ ಥಳಿಸಿದ ಡಿಸಿಗೆ ಬಿಸಿ ಮುಟ್ಟಿಸಿದ ಸಿಎಂ

ರಾಯ್ಪುರ: ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಗಳಿಗೆ ಅಧಿಕಾರಿಗಳು ಥಳಿಸುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇಂಥಹದ್ದೇ ಘಟನೆ ಛತ್ತೀಸ್ ಗಢದದಲ್ಲಿ ನಡೆದಿದ್ದು, ಜಿಲ್ಲಾಧಿಕಾರಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ.

ಸೂರಜ್ ಪುರ ಜಿಲ್ಲೆಯ ಜಿಲ್ಲಾಧಿಕಾರಿ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿಯನ್ನು ಥಳಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಅಧಿಕಾರಿ ಕ್ಷಮೆ ಕೋರಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಯಲ್ಲಿದೆ. ಆದರೆ ಅಮಾನ್ ಮಿತ್ತಲ್ (23) ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಅಧಿಕಾರಿಗಳು ಆತನನ್ನು ತಡೆದಿದ್ದರು. ತಾನು ಸಂಚರಿಸುತ್ತಿರುವುದಕ್ಕೆ ಕಾರಣ ಹೇಳಲು ಯತ್ನಿಸುತ್ತಿದ್ದ ಯವಕ ಮೊಬೈಲ್ ಫೋನ್ ಹಾಗೂ ಕಾಗದವನ್ನು ತೋರಿಸುತ್ತಿದ್ದದ್ದು ವೀಡಿಯೋದಲ್ಲಿ ದಾಖಲಾಗಿದೆ. ಆದರೆ ಅಧಿಕಾರಿ ಅದನ್ನು ಕಸಿದುಕೊಂಡು ಎಸೆದಿರುವುದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಈ ಬೆನ್ನಲ್ಲೇ ಹಿರಿಯ ಅಧಿಕಾರಿಯೊಬ್ಬರು ಯುವಕನನ್ನು ಥಳಿಸಲು ಪ್ರಾರಂಭಿಸಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಥಳಿಸುವಂತೆ ಹೇಳಿದ್ದಾರೆ. ಪರಿಣಾಮ ಯುವಕನಿಗೆ ಅಧಿಕಾರಿಗಳು ದೊಣ್ಣೆಯಿಂದ ಹೊಡೆದಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ರಣ್ ಬೀರ್ ಶರ್ಮಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿದ ಯುವಕನೋರ್ವನಿಗೆ ಥಳಿಸುತ್ತಿರುವ ವೀಡಿಯೋ ವೈರಲ್ ಆಗತೊಡಗಿದೆ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಈ ಸಾಂಕ್ರಾಮಿಕದ ಅವಧಿಯಲ್ಲಿ ಸೂರಜ್ ಪುರ ಜಿಲ್ಲೆ ಅಪಾರ ಪ್ರಮಾಣದ ಜೀವ ಹಾನಿಯನ್ನು ಕಂಡಿದೆ. ಈ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ನಾವು ರಾಜ್ಯ ಸರ್ಕಾರದ ಅಧಿಕಾರಿಗಳು ಶ್ರಮಿಸುತ್ತಿದ್ದೇವೆ ಎಂದು ತಮ್ಮ ಹೇಳಿಕೆಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸೂರಜ್‍ಪುರ ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರು ಯುವಕನ ಮೇಲೆ ವರ್ತಿಸಿದ ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಇದು ತುಂಬಾ ದುಃಖಕರ ಮತ್ತು ಖಂಡನೀಯ. ಛತ್ತೀಸ್‍ಗಢದಲ್ಲಿ ನಡೆಯುವ ಅಂತಹ ಯಾವುದೇ ಕೃತ್ಯವನ್ನು ಸಹಿಸುವುದಿಲ್ಲ. ಜಿಲ್ಲಾಧಿಕಾರಿ ರಣಬೀರ್ ಶರ್ಮಾ ಅವರನ್ನು ತಕ್ಷಣ ಕರ್ತವ್ಯದಿಂದ ತಗೆದು ಹಾಕುವಂತೆ ಸೂಚನೆ ನೀಡಲಾಗಿದೆ ಎಂದು ಛತ್ತೀಸ್‍ಗಢ ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *