ಕೊರೊನಾ ತಗುಲಿದ ಸುತ್ತಲಿನ 50 ಮನೆಗಳ ಎಲ್ಲರಿಗೂ ಟೆಸ್ಟ್: ದಕ್ಷಿಣ ಕನ್ನಡ ಡಿಸಿ

– ಟೆಸ್ಟಿಂಗ್ ಹೆಚ್ಚಿಸಿ, ಪಾಸಿಟಿವಿಟಿ ರೇಟ್ ತಗ್ಗಿಸಲು ಪ್ಲಾನ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಡಿಸಿ ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಇನ್ನು ಪಾಸಿಟಿವ್ ಬಂದ ಸೋಂಕಿತರ ಮನೆ ಸಮೀಪದ 50 ಮನೆಗಳಲ್ಲಿನ ಎಲ್ಲರಿಗೂ ಕಡ್ಡಾಯವಾಗಿ ಕೊರೊನಾ ಟೆಸ್ಟ್ ನಡೆಸಬೇಕು, ಅಪಾರ್ಟ್‍ಮೆಂಟ್ ಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದರೂ ಸೋಂಕಿತ ವಾಸಿಸುವ ಮಹಡಿ, ಅದರ ಮೇಲಿನ ಮತ್ತು ಕೆಳಗಿನ ಮಹಡಿಗಳಲ್ಲಿ ವಾಸವಾಗಿರುವ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಬೇಕು. ಜೊತೆಗೆ ಸೋಂಕಿತರ ಮನೆ ಮತ್ತು ಅಪಾರ್ಟ್‍ಮೆಂಟ್ ಗಳ ಸುತ್ತ ring surveillance ಕ್ರಮಕ್ಕೆ ಸೂಚನೆ ನೀಡಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರು ಮೊಬೈಲ್ ಕೋವಿಡ್ ಟೆಸ್ಟಿಂಗ್ ಟೀಮ್ ಮಾಡಲಾಗಿದ್ದು, ಅದರಲ್ಲಿ ಇಬ್ಬರು ಲ್ಯಾಬ್ ಟೆಕ್ನಿಶಿಯನ್ ಗಳು ಕಾರ್ಯ ನಿರ್ವಹಿಸಲಿದ್ದಾರೆ. ಮನೆ ಮತ್ತು ಖಾಸಗಿ ಕ್ಲೀನಿಕ್ ಗಳಿಗೆ ತೆರಳಿ ರ್ಯಾಂಡಮ್ ಟೆಸ್ಟ್ ನಡೆಸಬೇಕು. ನಗರ ಮಾತ್ರವಲ್ಲದೆ ದ.ಕ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲೂ ಮೊಬೈಲ್ ಟೆಸ್ಟಿಂಗ್ ಲ್ಯಾಬ್ ಮಾಡಲು ನಿರ್ಧರಿಸಲಾಗಿದೆ.

ಸದ್ಯ ಜಿಲ್ಲೆಯಲ್ಲಿ 3,500ರ ವರೆಗೆ ಟೆಸ್ಟಿಂಗ್ ಆಗುತ್ತಿದ್ದು, ಇನ್ನು ಮುಂದೆ ನಿತ್ಯ 6 ಸಾವಿರ ಟೆಸ್ಟಿಂಗ್ ಗೆ ಸೂಚನೆ ನೀಡಲಾಗಿದೆ. ಎಲ್ಲ ಸೋಂಕಿತರ ಪ್ರಾಥಮಿಕ ಸಂಪರ್ಕಗಳನ್ನು ಟ್ರೇಸ್ ಮಾಡಿ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *