ಕೊರೊನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆ ಬಳಸಿಕೊಳ್ಳಲು ಸರ್ಕಾರದ ಪ್ಲಾನ್- ದುಬಾರಿ ದರದ ಟೆನ್ಶನ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾ ಸ್ಫೋಟ ಆಗುತ್ತಿದೆ. ಇನ್ನೂ ಅರ್ಧಲಕ್ಷ ಸ್ಯಾಂಪಲ್ ಟೆಸ್ಟ್‌ಗಳ ವರದಿ ಬರಬೇಕಿದೆ. ಮುಂಬೈನಿಂದ ಒಂದೂವರೆ ಲಕ್ಷ ಮಂದಿ ಕನ್ನಡಿಗರು ರಾಜ್ಯಕ್ಕೆ ಬರಲು ಸಜ್ಜಾಗಿದ್ದಾರೆ. ಕೊರೊನಾ ಸ್ಫೋಟದ ಸದ್ಯದ ತೀವ್ರತೆ ಗಮನಿಸಿದರೆ ಮುಂದಿನ 10 ದಿನದಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ದಾಟಬಹುದು ಎಂದು ಅಂದಾಜಿಸಲಾಗಿದೆ.

ಕೊರೊನಾ ಸೋಂಕಿತರಿಗೆ ಎಲ್ಲಿ ಹೇಗೆ ಚಿಕಿತ್ಸೆ ಕೊಡಬೇಕು ಎಂದು ರಾಜ್ಯ ಸರ್ಕಾರ ತಲೆ ಕೆಡಿಸಿಕೊಂಡಿದೆ. 7 ಸಾವಿರ ಬೆಡ್‍ಗಳನ್ನು ರೆಡಿ ಮಾಡಿದೆ. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಬಳಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು ದೇಶದಲ್ಲಿ ಎಲ್ಲೂ ಇರದ ದುಬಾರಿ ದರಗಳನ್ನು ಕೊರೊನಾ ಚಿಕಿತ್ಸೆಗೆ ನಿಗದಿ ಮಾಡಲು ಮುಂದಾಗಿದೆ. ಈ ಬಗ್ಗೆ ‘ಪಬ್ಲಿಕ್ ಟಿವಿ’ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ಕೊರೊನಾ ತಾಂಡವ ಆಡುತ್ತಿರುವ ಮಹಾರಾಷ್ಟ್ರದಲ್ಲೂ ಖಾಸಗಿ ಆಸ್ಪತ್ರೆಗಳಲ್ಲಿ ಇಷ್ಟೊಂದು ದರ ಇಲ್ಲ. ನಮ್ಮ ರಾಜ್ಯದಲ್ಲೇಕೆ ದುಪ್ಪಟ್ಟು ದರ ವಿಧಿಸಲು ಖಾಸಗಿ ಆಸ್ಪತ್ರೆಗಳು ಮುಂದಾಗುತ್ತಿದೆ ಎನ್ನುವ ಪ್ರಶ್ನೆಯನ್ನ ಪಬ್ಲಿಕ್ ಟಿವಿ ಸರ್ಕಾರದ ಮುಂದಿಟ್ಟಿತ್ತು. ಇದಕ್ಕೆ ಕೂಡಲೇ ಸ್ಪಂದಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಖಾಸಗಿ ಆಸ್ಪತ್ರೆಗಳ ಪ್ರಸ್ತಾಪಿತ ದರವನ್ನು ಸರ್ಕಾರ ಒಪ್ಪಲು ಆಗಲ್ಲ. ಯಾವುದೇ ಕಾರಣಕ್ಕೂ ಅವರು ಹೇಳಿದ ದರ ಫಿಕ್ಸ್ ಮಾಡಲ್ಲ. ಶೀಘ್ರವೇ ಸರ್ಕಾರವೇ ಕೊರೊನಾ ಚಿಕಿತ್ಸೆಗೆ ಒಂದು ದರ ನಿಗದಿ ಮಾಡಲಿದೆ. ಒಂದು ಸಣ್ಣ ಕಂಪ್ಲೆಂಟ್ ಬಂದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳ ಪ್ರಸ್ತಾಪಿತ ದರ:
> ಜನೆರಲ್ ವಾರ್ಡ್ – 10,000 ರೂ.
> ಸ್ಪೆಷಲ್ ವಾರ್ಡ್ – 20,000 ರೂ.
> ಐಸಿಯು ವಾರ್ಡ್ – 25,000 ರೂ.
> ವೆಂಟಿಲೇಟರ್ – 35,000 ರೂ.

ಆದರೆ ಕೊರೋನಾ ಪೀಡಿತ ಮಹಾರಾಷ್ಟ್ರದಲ್ಲಿ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ವಿಧಿಸುತ್ತಿರುವ ದರ ಭಾರೀ ಕಡಿಮೆ ಇದೆ.

‘ಮಹಾ’ ಖಾಸಗಿ ಆಸ್ಪತ್ರೆಗಳ ದರ:
> ಜನೆರಲ್ ವಾರ್ಡ್ – 4,000 ರೂ.
> ಸ್ಪೆಷಲ್ ವಾರ್ಡ್ – 6,000 ರೂ.
> ಐಸಿಯು ವಾರ್ಡ್ – 7,500 ರೂ.
> ವೆಂಟಿಲೇಟರ್ – 9,000 ರೂ.

Comments

Leave a Reply

Your email address will not be published. Required fields are marked *