ಕೊರೊನಾ ಕಂಟಕ – ಶಿವಮೊಗ್ಗದ ಕಂಟೈನ್ಮೆಂಟ್ ವಲಯದಲ್ಲಿ ತೀವ್ರ ಕಟ್ಟೆಚ್ಚರ

ಶಿವಮೊಗ್ಗ: ಜಿಲ್ಲೆಯಲ್ಲಿ ಈಗಾಗಲೇ ಐದು ಕಂಟೈನ್ಮೆಂಟ್ ವಲಯಗಳನ್ನು ಘೋಷಿಸಲಾಗಿದ್ದು, ಈ ಪ್ರದೇಶದಲ್ಲಿ ಯಾರೂ ಮನೆಯಿಂದ ಹೊರ ಬಾರದಂತೆ ಸೂಕ್ತ ಕಟ್ಟೆಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕೆ.ಬಿ ಶಿವಕುಮಾರ್ ಅವರು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ, ಕೋವಿಡ್-19 ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದರು. ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಕಂಟೈನ್ಮೆಂಟ್ ಪ್ರದೇಶದಿಂದ ಮೆಡಿಕಲ್ ಎಮರ್ಜೆನ್ಸಿ ಪ್ರಕರಣಗಳನ್ನು ಮಾತ್ರ ಹೊರಗೆ ಬಿಡಬೇಕು. ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ತಕ್ಷಣ ಕಂಟೈನ್ಮೆಂಟ್ ಪ್ರದೇಶ ಗುರುತಿಸಿ ಬಂದೋಬಸ್ತು ಏರ್ಪಡಿಸಬೇಕು. ಕಂಟೈನ್ಮೆಂಟ್ ಪ್ರದೇಶದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಬೇಕು. ಈ ವಲಯದಲ್ಲಿ 2 ಆಶಾ ಕಾರ್ಯಕರ್ತೆಯರು, 2 ಪೊಲೀಸ್ ಸಿಬ್ಬಂದಿ ಬಿಟ್ಟರೆ ಬೇರೆ ಯಾವುದೇ ಸರ್ಕಾರಿ ಅಧಿಕಾರಿಗಳು ಅಡ್ಡಾಡಬಾರದು. ಅದೇ ರೀತಿ ಕ್ವಾರಂಟೈನ್ ಕೇಂದ್ರಗಳ ಒಳಗೆ ನಿಗದಿಪಡಿಸಿರುವ ಸಿಬ್ಬಂದಿ ಬಿಟ್ಟರೆ ಬೇರೆ ಯಾರಿಗೂ ಪ್ರವೇಶವಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.

ಕಂಟೈನ್ಮೆಂಟ್ ಪ್ರದೇಶದಲ್ಲಿ ಪ್ರತಿದಿನ ಆರೋಗ್ಯ ಸಮೀಕ್ಷೆ ನಡೆಸಬೇಕು. ರೋಗ ಲಕ್ಷಣಗಳು ಕಂಡು ಬಂದವರ ಗಂಟಲು ದ್ರವವನ್ನು ಸಂಗ್ರಹಿಸಿ ಕಳುಹಿಸಬೇಕು ಎಂದರು. ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲು ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯಲ್ಲಿ ತಂಡವನ್ನು ರಚಿಸಲಾಗಿದ್ದು, ಈ ತಂಡಕ್ಕೆ ತಹಶೀಲ್ದಾರ್ ಹಾಗೂ ಆರೋಗ್ಯ ಇಲಾಖೆ ಸಮರ್ಪಕ ಮಾಹಿತಿಯನ್ನು ತಕ್ಷಣ ಒದಗಿಸಬೇಕು. ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿದ ತಕ್ಷಣ ಅವರ ಗಂಟಲು ದ್ರವ ಸಂಗ್ರಹಿಸಿ ತಪಾಸಣೆಗೆ ಕಳುಹಿಸಬೇಕು. 14 ದಿನ ಕ್ವಾರಂಟೈನ್ ಪೂರ್ಣಗೊಳಿಸಿರುವವರನ್ನು ಹೋಂ ಕ್ವಾರೆಂಟೈನ್‍ಗೆ ಕಳುಹಿಸಬೇಕು ಎಂದು ಹೇಳಿದರು.

ಇನ್ನು ಜನರು ಹೆಚ್ಚು ಸೇರುವ ಸ್ಥಳಗಳನ್ನು ಈಗಾಗಲೇ ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದ್ದು, ಅಂತಹ ಕಡೆಗಳಲ್ಲಿ ಪ್ರತಿದಿನ ರಾತ್ರಿ ಕಡ್ಡಾಯವಾಗಿ ಸೋಂಕು ನಾಶಕ ಸಿಂಪಡಣೆ ಮಾಡಬೇಕು ಎಂದರು. ಗುರುವಾರ ಒಂದೇ ದಿನ ಶಿಮ್ಸ್ ಪ್ರಯೋಗಾಲಯದಲ್ಲಿ 781 ಗಂಟಲ ದ್ರವ ಸ್ಯಾಂಪಲ್ ಫಲಿತಾಂಶ ಬಂದಿದ್ದು, ಪ್ರಯೋಗಾಲಯದ ಸಿಬ್ಬಂದಿಗೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಅನುರಾಧ, ಶಿಮ್ಸ್ ನಿರ್ದೇಶಕ ಡಾ.ಗುರುಪಾದಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *