ಕ್ವಾರಂಟೈನ್ ತಪ್ಪಿಸಿಕೊಳ್ಳಲು ಪಾಸ್ ಪಡೆಯದೆ ಮಹಾರಾಷ್ಟ್ರದಿಂದ ಶಿರಸಿಗೆ ಬಂದ ಚಾಲಕರು

– ಓರ್ವ ವಶಕ್ಕೆ, ಇನ್ನೋರ್ವ ಪರಾರಿ

ಕಾರವಾರ: ಮಹಾರಾಷ್ಟ್ರದಿಂದ ಯಾವುದೇ ಪಾಸ್ ಇಲ್ಲದೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಬಂದಿದ್ದ ಓರ್ವ ಚಾಲಕನನ್ನು ಸ್ಥಳೀಯರ ದೂರಿನ ಆಧಾರದಲ್ಲಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದ್ದು, ಈತನೊಂದಿಗೆ ಇದ್ದ ಸಹ ಚಾಲಕ ಪರಾರಿಯಾಗಿದ್ದಾನೆ.

ಪೊಲೀಸರು ವಶಕ್ಕೆ ಪಡೆದ ಮಹಾರಾಷ್ಟ್ರ ಮೂಲದ ಚಾಲಕನ ಮಾಹಿತಿ ಪತ್ತೆಹಚ್ಚಲಾಗಿದ್ದು, ಪರಾರಿಯಾದ ಚಾಲಕನ ಮಾಹಿತಿ ಕಲೆಹಾಕಲಾಗುತ್ತಿದೆ. ವಶಕ್ಕೆ ಪಡೆದ ವ್ಯಕ್ತಿ ಶಿರಸಿಯ ದೀವಗಿ ವಾರ್ನರ್ ಫ್ಯಾಕ್ಟರಿಗೆ ಸೇರಿದ ಚಾಲಕನಾಗಿದ್ದು, ಮಹಾರಾಷ್ಟ್ರದಿಂದ ಯಾವುದೇ ಪಾಸ್ ಪಡೆಯದೆ ಸಹ ಚಾಲಕನ ಜೊತೆ ಶಿರಸಿಗೆ ಬಂದಿದ್ದನು. ಅಲ್ಲದೇ ಇಲ್ಲಿ ದೀವಗಿ ವಾರ್ನರ್ ಫ್ಯಾಕ್ಟರಿಗೆ ಸೇರಿದ್ದ ಸಹ್ಯಾದ್ರಿ ಕಾಲೋನಿಯ ಮನೆಯಲ್ಲಿ ಇಬ್ಬರು ತಂಗಿದ್ದರು.

ಕ್ವಾರಂಟೈನ್ ಮಾಡುವ ಹಿನ್ನೆಲೆಯಲ್ಲಿ ಮಾಹಿತಿ ನೀಡದೆ ತಪ್ಪಿಸಿಕೊಂಡಿದ್ದ ಚಾಲಕರ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಓರ್ವ ತಪ್ಪಿಸಿಕೊಂಡಿದ್ದಾನೆ. ಇತ್ತ ಓರ್ವನನ್ನು ಪೊಲೀಸರು ವಶಕ್ಕೆ ಪಡೆದು, ಶಿರಸಿಯ ಅಲೇಖ ಇಂಟರ್‌ನ್ಯಾಷನಲ್ ಕ್ವಾರಂಟೈನ್ ಸೆಂಟರ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಇನ್ನೋರ್ವ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶಿರಸಿಯ ದೀವಗಿ ಫ್ಯಾಕ್ಟರಿಯಲ್ಲಿ ಮಹಾರಾಷ್ಟ್ರದಿಂದ ಬಂದ ಹಲವು ಚಾಲಕರಿದ್ದು, ಕೆಲವರು ಮಾತ್ರ ಪಾಸ್ ಪಡೆದು ಅನುಮತಿಯೊಂದಿಗೆ ಬಂದಿದ್ದಾರೆ. ಕೆಲವರು ಅನುಮತಿ ಪಡೆಯದೇ ಬಂದಿದ್ದು, ನಗರದ ವಿವಿಧ ಭಾಗದಲ್ಲಿ ತಂಗಿದ್ದಾರೆ. ಶಿರಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಉಳಿದವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

ಮಹಾರಾಷ್ಟ್ರ ಸೋಂಕಿತರ ಭಯ ಮಲೆನಾಡಿನ ಶಿರಸಿಗೂ ತಟ್ಟಿತೇ?
ಇಷ್ಟು ದಿನ ಮಹಾರಾಷ್ಟ್ರದಿಂದ ಬಂದವರಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಕೊರೊನಾ ಸೋಂಕು ಇದೀಗ ಮಲೆನಾಡು ಭಾಗಕ್ಕೂ ಆವರಿಸಿತಾ ಎಂಬ ಆತಂಕ ಸೃಷ್ಟಿಯಾಗಿದೆ. ಹಲವರು ಮಹಾರಾಷ್ಟ್ರದಿಂದ ಯಾವುದೇ ಅನುಮತಿ ಪಡೆಯದೇ ಕಳ್ಳಹಾದಿ ಮೂಲಕ ಜಿಲ್ಲೆಯ ಭಾಗಕ್ಕೆ ಬಂದಿದ್ದು, ಕ್ವಾರಂಟೈನ್ ಆಗದೇ ತಪ್ಪಿಸಿಕೊಳ್ಳುತ್ತಿದ್ದಾರೆ.

ಮಹಾರಾಷ್ಟ್ರದಿಂದ ಬಂದವರಲ್ಲಿ ಮಲೆನಾಡಿನ ಭಾಗವಾದ ಯಲ್ಲಾಪುರ, ಜೋಯಿಡಾ ಭಾಗಕ್ಕೂ ಸೋಂಕು ಹಬ್ಬಿತ್ತು. ಶಿರಸಿ ಭಾಗದಲ್ಲಿ ಯಾವುದೇ ಸೋಂಕಿತ ಪ್ರಕರಣಗಳು ಇರಲಿಲ್ಲ. ಆದರೆ ಮಹಾರಾಷ್ಟ್ರದಿಂದ ಬಂದ ಚಾಲಕರಿಂದ ಶಿರಸಿಯಲ್ಲಿಯೂ ಕೊರೊನಾ ಸೋಂಕು ಹರಡುವ ಸಾಧ್ಯತೆಗಳಿದ್ದು, 9 ಜನರ ವರದಿ ಕೊರೊನಾ ಪಾಸಿಟಿವ್ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತಿದೆ. ಕಳ್ಳಹಾದಿಯಿಂದ ಬಂದ ಜನರನ್ನು ಹುಡುಕಿ ಕ್ವಾರಂಟೈನ್ ಮಾಡುವುದೇ ಜಿಲ್ಲಾ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

Comments

Leave a Reply

Your email address will not be published. Required fields are marked *