ಕೊರೊನಾ ಎಫೆಕ್ಟ್- ಸಂಕಷ್ಟದಲ್ಲಿ ಬ್ಯೂಟಿಷಿಯನ್‍ಗಳು

– ಮನೆ, ಅಂಗಡಿ ಬಾಡಿಗೆ ಕಟ್ಟಲಾಗದೆ ಕಂಗಾಲು
– ನೆರವು ನೀಡುವಂತೆ ಮನವಿ

ದಾವಣಗೆರೆ: ಕೊರೊನಾ ಮಹಾಮಾರಿಯಿಂದಾಗಿ ಬ್ಯೂಟಿಷಿಯನ್ಸ್ ಗಳು ಜೀವನ ನಡೆಸುವುದೇ ಕಷ್ಟವಾಗಿದ್ದು, ಅವರ ಗೋಳು ಹೇಳತೀರದಾಗಿದೆ.

ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬ್ಯೂಟಿ ಪಾರ್ಲರ್ ಗಳಿವೆ. 1,500 ಕ್ಕೂ ಹೆಚ್ಚು ಕುಟುಂಬಗಳು ಈ ಉದ್ಯೋಗದಿಂದಲೇ ಜೀವನ ನಡೆಸುತ್ತಿವೆ. ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ನಲ್ಲಿ 103 ಮಂದಿ ಸದಸ್ಯರಿದ್ದಾರೆ. ಜೊತೆಗೆ ಕೆಲಸ ಮಾಡಲು ಯುವತಿಯರು ಹಾಗೂ ಮಹಿಳೆಯರು ಬರುತ್ತಾರೆ. ಕೊರೊನಾ ಹಿನ್ನೆಲೆ ಇವರೆಲ್ಲರ ಬದುಕು ಮೂರಾಬಟ್ಟೆಯಾಗಿದೆ. ಯಾರೂ ಪಾರ್ಲರ್ ಗೆ ಬಾರದ ಹಿನ್ನೆಲೆ ಬಾಡಿಗೆ, ಕುಟುಂಬ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.

ಲಾಕ್‍ಡೌನ್ ಹಿನ್ನೆಲೆ ಮದುವೆ, ಶುಭ ಸಮಾರಂಭಗಳು, ದೇವಸ್ಥಾನಗಳ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಬ್ಯೂಟಿಷಿಯನ್‍ಗಳಿಗೆ ಮಾರ್ಚ್ ನಿಂದ ಮೂರ್ನಾಲ್ಕು ತಿಂಗಳ ಕಾಲ ಅಧಿಕ ದುಡಿಮೆ ಇರುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಾಗಿರುವುದರಿಂದ ನಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಪಾರ್ಲರ್ ಬಾಡಿಗೆಯ ಜೊತೆಗೆ ಮನೆಯ ಬಾಡಿಗೆಯನ್ನೂ ಸಹ ಕಟ್ಟಬೇಕು. ಸಂಕಷ್ಟದಲ್ಲಿರುವ ನಮ್ಮ ನೆರವಿಗೆ ಯಾರೂ ಬಂದಿಲ್ಲ, ಮುಂದೆ ಮಳೆಗಾಲ, ನಂತರ ಆಷಾಢ ಬರುತ್ತದೆ. ಆಗ ಕೆಲಸ ಇರುವುದಿಲ್ಲ, ಮಹಿಳೆಯರು ಈ ವೃತ್ತಿಯಿಂದಲೇ ಜೀವನ ಸಾಗಿಸಬೇಕು. ಖಾಲಿ ಕುಳಿತಿರುವುದರಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದೇವೆ. ಸರ್ಕಾರ ಬೇರೆ ಬೇರೆ ವರ್ಗದವರನ್ನು ಗುರುತಿಸಿ ಸಹಾಯ ಹಸ್ತ ನೀಡಿದೆ. ಆದರೆ ನಮಗೆ ಯಾವುದೇ ಸಹಾಯ ಮಾಡಿಲ್ಲ. ಈ ವೃತ್ತಿಯಲ್ಲಿ ಎಷ್ಟೋ ಹೆಣ್ಣು ಮಕ್ಕಳು ಗಂಡನನ್ನು ಕಳೆದುಕೊಂಡವರು ಇದ್ದಾರೆ. ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕು ಎಂದು ಬ್ಯೂಟಿಷಿಯನ್‍ಗಳು ಮನವಿ ಮಾಡಿದ್ದಾರೆ.

ಕಳೆದ ಎರಡು ತಿಂಗಳಿಂದ ಬ್ಯೂಟಿ ಪಾರ್ಲರ್‍ಗಳನ್ನು ತೆಗೆದಿಲ್ಲ. ಮಾತ್ರವಲ್ಲದೆ ಕೆಲವೊಂದು ಸೌಂದರ್ಯವರ್ಧಕಗಳ ಅವಧಿ ಮುಗಿದಿರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಂದಿಟ್ಟಿರುವ ಪರಿಕರಗಳು ಹಾಳಾಗುತ್ತಿವೆ. ಬಾಡಿಗೆಯನ್ನೂ ಪಾವತಿಸಬೇಕು. ಬ್ಯೂಟಿಷಿಯನ್‍ಗಳ ಕಷ್ಟಕ್ಕೆ ಯಾರೂ ಸ್ಪಂದಿಸಿಲ್ಲ, ಆಹಾರ ಪದಾರ್ಥಗಳ ಕಿಟ್ ಸಹ ನೀಡಿಲ್ಲ. ಅಲ್ಲದೆ ಸರ್ಕಾರ ನಮ್ಮ ಕಷ್ಟಕ್ಕೆ ಸ್ಪಂದಿಸುವ ಜೊತೆಗೆ ಆರ್ಥಿಕ ಸಹಾಯ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *