ಕೊರೊನಾ ಎಫೆಕ್ಟ್- ಬೆಂಗಳೂರು ತೊರೆದು ಹಳ್ಳಿಗಳಲ್ಲಿ ಕೃಷಿ ಮಾಡುತ್ತಿರುವ ಯುವಕರು

ಮಡಿಕೇರಿ: ಕೊರೊನಾ ವೈರಸ್ ಇಡೀ ಪ್ರಪಂಚವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದು, ಕೋಟ್ಯಂತರ ಉದ್ಯೋಗಗಳು ಕಡಿತವಾಗಿವೆ. ಇಷ್ಟು ದಿನ ಹಳ್ಳಿಗಳನ್ನು ಬಿಟ್ಟು ದುಡಿಮೆಗಾಗಿ ಮಹಾನಗರಗಳತ್ತ ಧಾವಿಸಿದ್ದ ಲಕ್ಷಾಂತರ ಯುವಕರು ಇದೀಗ ಮತ್ತೆ ಹಳ್ಳಿಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿಯೋ ಕೊಡಗು ಜಿಲ್ಲೆಯನ್ನು ಬಿಟ್ಟು ಸಾವಿರಾರು ಯುವಕರು ಮಡಿಕೇರಿಗೋ ಅಥವಾ ದೂರದ ಬೆಂಗಳೂರಿಗೋ ಇಲ್ಲವೇ ಹೊರ ರಾಜ್ಯ, ದೇಶಗಳಿಗೋ ಹೋಗಿ ದುಡಿಯುತ್ತಿದ್ದರು. ಹೀಗಾಗಿ ಒಂದು ಕಾಲಕ್ಕೆ ಭತ್ತದ ಕಣಜ ಎಂದು ಹೆಸರು ಪಡೆದಿದ್ದ ಕೊಡಗಿನ ಬಹುತೇಕ ಗದ್ದೆಗಳು ಪಾಳುಬಿದ್ದಿದ್ದವು. ಆದರೀಗ ಕೊರೊನಾ ಬಂದಿದ್ದೇ ತಡ ತಮ್ಮ ಹಳ್ಳಿಯೇ ಸೇಫ್ ಎಂದು ಯುವಕರು ಹಳ್ಳಿಗಳತ್ತ ದೌಡಾಯಿಸಿದ್ದಾರೆ.

ಹೀಗೆ ಬಂದವರು ಪಾಳುಬಿದ್ದಿದ್ದ ತಮ್ಮ ಗದ್ದೆಗಳಲ್ಲಿ ಮತ್ತು ಅಕ್ಕ ಪಕ್ಕದವರ ಗದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು ನಡುಬಗ್ಗಿಸಿ ದುಡಿಯಲು ಶುರುಮಾಡಿದ್ದಾರೆ. ಎಲ್ಲೋ ಹೋಗಿ ಮಾರಣಾಂತಿಕ ಖಾಯಿಲೆಗಳ ನಡುವೆಯೂ ದುಡಿಯುವುದಕ್ಕಿಂತ, ಗದ್ದೆಯಲ್ಲಿ ದುಡಿಯುವುದರಲ್ಲಿ ನೆಮ್ಮದಿ ಇದೆ ಎನ್ನುತ್ತಿದ್ದಾರೆ.

ಕೊರೊನಾ ವೈರಸ್ ಹಳ್ಳಿಗಳಿಗೂ ಹಬ್ಬುತ್ತಿರುವುದರಿಂದ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ. ಸಿಕ್ಕರೂ ಅವರ ಆರೋಗ್ಯ ಹೇಗಿದೆಯೊ ಎನ್ನುವ ಆತಂಕ ಕಾಡುತ್ತಿದೆ. ಜೊತೆಗೆ ಕಾರ್ಮಿಕರ ಬಳಕೆಯಿಂದ ಕೃಷಿ ವೆಚ್ಚ ಜಾಸ್ತಿಯಾಗುತ್ತದೆ. ಇದರಿಂದ ನಷ್ಟವಾಗುವ ಆತಂಕವೂ ಇದೆ. ಈ ಎಲ್ಲ ಕಾರಣಗಳಿಂದ ಯುವಕರು ಡ್ರಮ್ ಸೀಡ್ ಬಿತ್ತನೆ ವಿಧಾನದ ಮೊರೆ ಹೋಗಿದ್ದಾರೆ. ಇದರಿಂದ ಉತ್ತಮ ಬೆಳೆ ಬಂದು ಅಧಿಕ ಉತ್ಪಾದನೆ ಸಿಗುವ ಸಾಧ್ಯತೆ ಇದೆಯಂತೆ. ಈ ಕುರಿತು ಹಿರಿಯರ ಸಲಹೆ ಪಡೆದು ಕೃಷಿಯಲ್ಲಿ ತೊಡಗಿದ್ದಾರೆ.

ಇದನ್ನು ಗಮನಿಸಿರುವ ಹಿರಿಯರು ಕೂಡ, ಯುವಕರು ಮತ್ತೆ ಕೃಷಿಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ವಿಷಯ ಎನ್ನುತ್ತಿದ್ದಾರೆ. ಕೊರೊನಾ ಮಹಾಮಾರಿಗೆ ಹೆದರಿ ಹಳ್ಳಿಗಳತ್ತ ಮುಖ ಮಾಡಿರುವ ಯುವ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *