ಕೊರೊನಾ ಎಫೆಕ್ಟ್ ಪೌಷ್ಟಿಕ ಆಹಾರದತ್ತ ಮಹಿಳೆಯರ ಒಲವು- ಮಾತೃಪೂರ್ಣ ಆಹಾರಕ್ಕೆ ಹೆಚ್ಚಿದ ಬೇಡಿಕೆ

– ಕೊಡಗಿನಲ್ಲಿ ಯಶಸ್ಸು ಕಾಣುತ್ತಿದೆ ಮಾತೃಪೂರ್ಣ ಯೋಜನೆ

ಮಡಿಕೇರಿ: ಅಪೌಷ್ಟಿಕತೆ ನೀಗಿಸಲು ರಾಜ್ಯ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ಕಾಡದಂತೆ ತಡೆಯಲು ಮಾತೃಪೂರ್ಣ ಯೋಜನೆ ಜಾರಿಯಲ್ಲಿದೆ. ಆದರೆ ಇಷ್ಟು ದಿನ ಬಹುತೇಕ ಮಹಿಳೆಯರು ಇದರ ಉಪಯೋಗ ಪಡೆಯುತ್ತಿರಲಿಲ್ಲ. ಆದರೆ ಇದೀಗ ಕೊರೊನಾ ಬಳಿಕ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಸರ್ಕಾರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಪೌಷ್ಟಿಕತೆ ನೀಗಿಸಲು ಜಾರಿಗೆ ತಂದ ಮಾತೃಪೂರ್ಣ ಯೋಜನೆಗೆ ಈ ವರೆಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ದೊರೆತಿರಲಿಲ್ಲ. ಗರ್ಭಿಣಿ ಹಾಗೂ ಬಾಣಂತಿಯರು ಮಧ್ಯಾಹ್ನ ಅನ್ನ, ಸಾಂಬಾರ್, 200 ಮಿ.ಲೀಟರ್ ಹಾಲು, ಮೊಟ್ಟೆ ಹಾಗೂ ಕಬ್ಬಿಣ ಅಂಶವಿರುವ ಕಡಲೆ ಚಿಕ್ಕಿ ಇವುಗಳನ್ನು ಸೇವಿಸಲು ಅಂಗನವಾಡಿ ಕೇಂದ್ರಗಳಿಗೆ ಬರಬೇಕಿತ್ತು. ಬೆಟ್ಟ, ಗುಡ್ಡ ಹಾಗೂ ಕಡಿದಾದ ದಾರಿಗಳು ಇದ್ದುದ್ದರಿಂದ ಹೆಚ್ಚು ಮಹಿಳೆಯರು ಕೇಂದ್ರಗಳಿಗೆ ಬರುತ್ತಿರಲಿಲ್ಲ. ಆದರೆ ಕೊರೊನಾ ಹಾಗೂ ಲಾಕ್‍ಡೌನ್ ಬಳಿಕ ತಿಂಗಳಿಗಾಗುವಷ್ಟು ಆಹಾರ ಕಿಟ್‍ನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ನೀಡಲಾಗುತ್ತಿದೆ. ಮಹಿಳೆಯರ ಕುಟುಂಬಸ್ಥರು ಆಹಾರ ಕಿಟ್ಟ ತೆಗೆದುಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಕೇವಲ ಶೇ.15 ರಷ್ಟಿದ್ದ ಯೋಜನೆಯ ಗುರಿ, ಪ್ರಸ್ತುತ ಶೇ.100ಕ್ಕೆ ತಪುಪಿದೆ ಎಂದು ಅಂಗನವಾಡಿ ಸಿಬ್ಬಂದಿ ತಿಳಿಸಿದ್ದಾರೆ.

ಪೋಷಣ್ ಅಭಿಯಾನದಡಿ ಅಪೌಷ್ಟಿಕತೆ ನಿವಾರಣೆ ಕುರಿತು ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಕಳೆದ ಎರಡು ತಿಂಗಳಿಂದ ಸರ್ಕಾರದ ಆದೇಶದಂತೆ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶವಿರುವ 4 ಕೆ.ಜಿ.ಅಕ್ಕಿ, 25 ಮೊಟ್ಟೆಗಳು, ಶೇಂಗಾ ಬೀಜ, ಹಾಲಿನಪುಡಿ, ಹೆಸರುಕಾಳು, ಸಕ್ಕರೆ ಹಾಗೂ ಸೋಡಿಯಂ ಉಪ್ಪು ಒಳಗೊಂಡ ಆಹಾರ ಕಿಟ್ ಕೊಡುತ್ತಿದ್ದೇವೆ. ಈ ಹಿಂದೆ ಪ್ರತಿನಿತ್ಯ ಯಾರೂ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿರಲಿಲ್ಲ. 10 ಜನರಲ್ಲಿ ಒಬ್ಬಿಬ್ಬರು ಮಾತ್ರ ಬರುತ್ತಿದ್ದರು. ಆದರೆ ಕೊರೊನಾ ಹಾಗೂ ಲಾಕ್‍ಡೌನ್ ಬಳಿಕ ಅಂಗನವಾಡಿ ಕೇಂದ್ರಗಳಲ್ಲಿನ ಕಿಟ್‍ಗಳನ್ನು ಮಹಿಳೆಯರ ಕುಟುಂಬಸ್ಥರು ಕೊಂಡೊಯ್ಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಕಷ್ಟಪಟ್ಟು ಅಂಗನವಾಡಿ ಕೇಂದ್ರಗಳಿಗೆ ಹೋಗಿ ಊಟ ಮಾಡಬೇಕಿದ್ದವರಿಗೆ ಕಳೆದೆರಡು ತಿಂಗಳಿಂದ ಸರ್ಕಾರ ರೂಪಿಸಿರುವ ಟೇಕ್ ಹೋಮ್ ಫುಡ್ ವ್ಯವಸ್ಥೆ ಸಾಕಷ್ಟು ಅನುಕೂಲ ಮಾಡಿದೆ.

Comments

Leave a Reply

Your email address will not be published. Required fields are marked *