ಕೊರೊನಾ ಎಫೆಕ್ಟ್ – ಕುದುರೆ ಬದಲಾಗಿ ಒಂಟೆ ಏರಿದ ವರ

ಮುಂಬೈ: ಕೊರೊನಾ ಎರಡನೇ ಅಲೆಯ ಆತಂಕದ ನಡುವೆಯೂ ದೇಶದಲ್ಲಿ ಮದುವೆ, ಸಮಾರಂಭ, ರಾಜಕೀಯ ಸಮಾವೇಶಗಳು ನಡೆಯುತ್ತಿವೆ. ಇದೀಗ ಕೊರೊನಾ ಭಯದಿಂದಾಗಿ ಯುವಕ ಮದುವೆಯಲ್ಲಿ ಕುದುರೆ ಬದಲಾಗಿ ಒಂಟೆ ಏರಿ ವಧುವಿನ ಮನೆ ತಲುಪಿರುವ ಫೋಟೋಗಳು ವೈರಲ್ ಆಗಿವೆ.

ಮಹಾರಾಷ್ಟ್ರದ ಸಾಲೇಗಾಂವ್ ಜಿಲ್ಲೆ ಯ ಮಾಜಿ ಸೈನಿಕ ಮಹಾದೇವ್ ವರ್ಪೆ ಪುತ್ರ ಅಕ್ಷಯ್ ಮದುವೆ ಬೀಡ್ ಜಿಲ್ಲೆಯ ರಣ್‍ದೀವ್ ಪುತ್ರಿ ಐಶ್ವರ್ಯಾ ಜೊತೆ ನಿಗದಿಯಾಗಿತ್ತು. ಅಕ್ಷಯ್ ಪತ್ರಕರ್ತನಾಗಿದ್ದು, ಐಶ್ವರ್ಯಾ ಬಿ.ಎಡ್ ಪದವಿಧರೆ. ಸಾಲೆಗಾಂವ್ ನಲ್ಲಿ ಸದ್ಯ ಕೊರೊನಾ ಸಕ್ರಿಯ ಪ್ರಕರಣಗಳಿಲ್ಲ. ಹಾಗಾಗಿ ಮಹಾದೇವ್ ತಮ್ಮ ಕಾರ್ಯಕ್ರಮದಿಂದಾಗಿ ಸೋಂಕು ಹರಡದಂತೆ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರು. ಮದುವೆಗೆ ಆಪ್ತ 50 ಜನರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ಒಂಟೆ ಪ್ಲಾನ್: ಕುದುರೆ ಮೇಲೆ ವಧುವಿನ ಮನೆಗೆ ಹೋದ್ರೆ ಮಾರ್ಗಮಧ್ಯೆ ಗೆಳೆಯರು, ಕುಟುಂಬಸ್ಥರು ಹಲವರು ಸುತ್ತುವರೆದು ಡ್ಯಾನ್ಸ್ ಮಾಡ್ತಾರೆ. ಕುದುರೆ ಮೆರವಣಿಗೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಕ್ಷಯ್ ಒಂಟೆ ಮೇಲೆ ಹೋಗುವ ಪ್ಲಾನ್ ಮಾಡಿದ್ದರು. ಒಂಟೆ ಮೇಲೆ ಕುಳಿತರೆ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಆಗಲಿದೆ ಎಂದು ತಿಳಿದು 12 ಸಾವಿರ ರೂ. ನೀಡಿ ಬಾಡಿಗೆ ಒಂಟೆ ತರಿಸಿದ್ದರು.

ಮದುವೆಯಲ್ಲಿ ಆಪ್ತರಿಗೆ ಆಹ್ವಾನ ನೀಡಿದ್ದರಿಂದ ಎರಡೂ ಕುಟುಂಬಗಳು ಕೊರೊನಾ ನಿಯಮಗಳನ್ನ ಪಾಲಿಸಿದ್ದಾರೆ. ಕೊನೆಗೆ ಕಾರಿನಲ್ಲಿ ವಧು ಕರೆದುಕೊಂಡು ಹೋಗುವಾಗಲೂ ಚಾಲಕನ ಬದಲಾಗಿ ಸ್ವತಃ ಅಕ್ಷಯ್ ಚಲಾಯಿಸಿದ್ದು ಮತ್ತೊಂದು ಮದುವೆ ವಿಶೇಷವಾಗಿತ್ತು.

Comments

Leave a Reply

Your email address will not be published. Required fields are marked *